ಕನ್ನಡ ಪತ್ರಿಕಾ ಲೋಕ (ಭಾಗ ೧೬೩) - ಬುದ್ಧಾಯುರ್ವೇದ

ಕನ್ನಡ ಪತ್ರಿಕಾ ಲೋಕ (ಭಾಗ ೧೬೩) - ಬುದ್ಧಾಯುರ್ವೇದ

ಡಾ. ಯು. ಕೃಷ್ಣ ಮುನಿಯಾಲ್ ಮೆಮೋರಿಯಲ್ ಟ್ರಸ್ಟ್ ನ ಮಾಸಿಕ "ಬುದ್ಧಾಯುರ್ವೇದ"

ಉಡುಪಿ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಆಸ್ಪತ್ರೆ, ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ (ಡಾ. ಯು. ಕೃಷ್ಣ ಮುನಿಯಾಲ್ ಮೆಮೋರಿಯಲ್ ಟ್ರಸ್ಟ್ ಪ್ರಾಯೋಜಿತ ಸಂಸ್ಥೆ)ದಿಂದ ಪ್ರಕಟಿಸುತ್ತಿದ್ದ ಮಾಸಿಕವಾಗಿತ್ತು " ಬುದ್ಧಾಯುರ್ವೇದ".

2014 ಜನವರಿಯಲ್ಲಿ ಆರಂಭವಾದ "ಬುದ್ಧಾಯುರ್ವೇದ" ಒಂದು ವರ್ಷ ಕಾಲ ಮಾತ್ರ ನಡೆದು ಬಳಿಕ ಸ್ಥಗಿತಗೊಂಡಿತು. ಪ್ರಕಟವಾದ ಅಷ್ಟೂ ಸಂಚಿಕೆ ಅತ್ಯಮೂಲ್ಯ ಮೌಲಿಕ ಬರೆಹಗಳಿಂದ ಕೂಡಿದ್ದು ಸಂಗ್ರಹಯೋಗ್ಯವಾಗಿ ಮೂಡಿಬಂದಿದೆ. ಡಾ. ಎಂ. ವಿಜಯಭಾನು ಶೆಟ್ಟಿ ಸಂಪಾದಕರಾಗಿದ್ದರು. ಡಾ. ಸತ್ಯನಾರಾಯಣ ಬಿ., ಡಾ. ಶ್ರದ್ಧಾ ವಿ. ಶೆಟ್ಟಿ, ಡಾ. ಶ್ರೀಪತಿ ಆಚಾರ್ಯ, ಡಾ. ದಿನೇಶ್ ನಾಯಕ್, ಡಾ. ರವಿಶಂಕರ್, ಡಾ. ಚಂದ್ರಕಾಂತ್, ಡಾ. ಹರಿಪ್ರಸಾದ್ ಶೆಟ್ಟಿ, ಡಾ. ಸಿಬ್ ಗತ್ ಉಲ್ಲಾ ಶರೀಫ್ ಹಾಗೂ ಡಾ. ವ್ಯಾಸರಾಜ್ ತಂತ್ರಿ ಸಂಪಾದಕ ಮಂಡಳಿ ಸದಸ್ಯರಾಗಿದ್ದರು.

44 ಪುಟಗಳ "ಬುದ್ಧಾಯುರ್ವೇದ" ದ ಬಿಡಿ ಸಂಚಿಕೆಯ ಬೆಲೆ ಇಪ್ಪತ್ತು ರೂಪಾಯಿಗಳಾಗಿತ್ತು. ಉಡುಪಿಯ ಸ್ಪ್ರಿಂಗ್ಸ್ - ದಿ ಡಿಸೈನ್ ಶಾಪ್ ನಲ್ಲಿ ಪತ್ರಿಕೆಯ ಪುಟ ವಿನ್ಯಾಸ ಆಗುತ್ತಿತ್ತು. ಮಂಗಳೂರಿನ ದಿಗಂತ ಮುದ್ರಣದಲ್ಲಿ ಮುದ್ರಣವಾಗುತ್ತಿತ್ತು. ಬುದ್ಧನ ಜೀವನ, ಉಪದೇಶಗಳು, ಜಾತಕ ಕತೆಗಳು, ಅಭಿಧಮ್ಮ, ಮಿಲಿಂದನ ಪ್ರಶ್ನೆಗಳು, ಚರಕ ಸಂಹಿತೆ, ಯೋಗ, ಬುದ್ಧನ ಶಿಷ್ಯರುಗಳ ಬಗ್ಗೆ, ಬೌದ್ಧ ಮತ ಗ್ರಂಥಗಳಲ್ಲಿನ ವಿಚಾರಗಳು, ಆಯುರ್ವೇದ ವಿಷಯ, ಆರೋಗ್ಯ, ಆಹಾರ, ಮಹಿಳೆಯರು - ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರ, ಪ್ರಚಲಿತ ವಿದ್ಯಾಮಾನಗಳು ಇತ್ಯಾದಿ ಅನೇಕ ಉಪಯುಕ್ತ ವಿಚಾರಗಳ ಬಗೆಗಿನ ಲೇಖನಗಳು, ಅಧ್ಯಯನತ್ಮಾಕ, ಸಂಶೋಧನಾ ಬರೆಹಗಳು "ಬುದ್ಧಾಯುರ್ವೇದ"ದಲ್ಲಿ ಪ್ರಕಟವಾಗುತ್ತಿತ್ತು.

~ ಶ್ರೀರಾಮ ದಿವಾಣ