ಕನ್ನಡ ಪತ್ರಿಕಾ ಲೋಕ (ಭಾಗ ೧೬೫) - ಕೆಂಬಾವುಟ

ಕನ್ನಡ ಪತ್ರಿಕಾ ಲೋಕ (ಭಾಗ ೧೬೫) - ಕೆಂಬಾವುಟ

ಸಿಪಿಐ ರಾಜ್ಯ ಮಂಡಳಿ ಮುಖವಾಣಿ ವಾರಪತ್ರಿಕೆ "ಕೆಂಬಾವುಟ"

1973 - 74ರ ಅವಧಿಯಲ್ಲಿ ಆರಂಭವಾಗಿ ಸುಧೀರ್ಘ ಕಾಲ ನಡೆದುಕೊಂಡುಬಂದು ಇತ್ತೀಚೆಗಿನ ಒಂದೆರಡು ವರ್ಷಗಳ ಹಿಂದೆಯಷ್ಟೇ ಪ್ರಕಟಣೆ ಸ್ಥಗಿತಗೊಂಡ ವಾರಪತ್ರಿಕೆ "ಕೆಂಬಾವುಟ". ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಕರ್ನಾಟಕ ರಾಜ್ಯ ಮಂಡಳಿಯ ಮುಖವಾಣಿಯಾಗಿದ್ದ "ಕೆಂಬಾವುಟ" ಟ್ಯಾಬ್ಲಾಯ್ಡ್ ಮಾದರಿಯಲ್ಲಿ 12 ಪುಟಗಳಲ್ಲಿ ಪ್ರಕಟವಾಗುತ್ತಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಎಸ್. ಆರ್. ಭಟ್ "ಕೆಂಬಾವುಟ" ದ ಮೊದಲ ಸಂಪಾದಕರಾಗಿದ್ದರು. ಇವರ ನಂತರ ಕ್ರಮವಾಗಿ ಮಂಗಳೂರಿನವರಾದ ಯು. ಎನ್. ಶ್ರೀನಿವಾಸ ಭಟ್ (ಹಿಂದೆ "ಅರುಣ" ಪತ್ರಿಕೆಯ ಸಂಪಾದಕರಾಗಿದ್ದವರು), ಮಂಗಳೂರಿನವರಾದ ಬಿ. ವಿ. ಕಕ್ಕಿಲ್ಲಾಯರು, ಮೂಲತಹ ಚಿಕ್ಕಮಗಳೂರಿನವರಾಗಿದ್ದು, ಬಳಿಕ ಬೆಂಗಳೂರಿನಲ್ಲಿ ವಾಸವಾಗಿದ್ದ ಸಿ. ವಿ. ಆನಂದ ಹಾಗೂ ಶಿವರಾಜ ಆರ್. ಬಿರಾದಾರ ಇವರುಗಳು ಬೇರೆ ಬೇರೆ ಅವಧಿಗಳಲ್ಲಿ "ಕೆಂಬಾವುಟ"ದ ಸಂಪಾದಕರಾಗಿದ್ದರು. ಹಿರಿಯ ಪತ್ರಕರ್ತರಾದ ಸನತ್ ಕುಮಾರ ಬೆಳಗಲಿ, ಬಿ. ಎಸ್. ಶೇಷಾದ್ರಿ, ಕೆ. ಶಾಂತಾಕುಮಾರಿ ಮೊದಲಾದವರು ವಿವಿಧ ಕಾಲಘಟ್ಟಗಳಲ್ಲಿ ಉಪ ಸಂಪಾದಕರಾಗಿದ್ದವರು.

ಬೆಂಗಳೂರಿನಿಂದ ಪ್ರಕಟಗೊಳ್ಳುತ್ತಿದ್ದ ಕೆಂಬಾವುಟ, ಆರಂಭಿಕ ಕಾಲದಲ್ಲಿ 'ಜನಶಕ್ತಿ ಮುದ್ರಣಾಲಯ' ದಲ್ಲೂ, ಬಳಿಕ 'ನವಕರ್ನಾಟಕ ಪ್ರಿಂಟರ್ಸ್' ನಲ್ಲಿ ಮುದ್ರಣವಾಗುತ್ತಿತ್ತು. ಅವಿಭಜಿತ ಭಾರತ ಕಮ್ಯೂನಿಸ್ಟ್ ಪಕ್ಷದ  ಮುಖವಾಣಿಯಾಗಿದ್ದ "ಅರುಣ" ದ ಮುಂದುವರಿಕೆಯ ಭಾಗವಾಗಿ ವಿಭಜಿತ ಸಿಪಿಐ "ಕೆಂಬಾವುಟ"ವನ್ನು ಆರಂಭಿಸಿತು. ಸಿಪಿಐ (ಎಂ) "ಐಕ್ಯರಂಗ" ವನ್ನು ಆರಂಭಿಸಿತು.

ಎರಡು ಅಥವಾ ಮೂರು ಪುಟಗಳಲ್ಲಿ ರಾಜ್ಯದಾದ್ಯಂತ ಪಕ್ಷ ಮತ್ತು ಇತರ ಸಂಘಟನೆಗಳು ನಡೆಸಿದ ಕಾರ್ಯಕ್ರಮ, ಹೋರಾಟಗಳ ಸುದ್ಧಿಗಳು ಕೆಂಬಾವುಟದಲ್ಲಿ ಇರುತ್ತಿತ್ತು. ಉಳಿದೆಲ್ಲಾ ಪುಟಗಳಲ್ಲೂ ರಾಜಕೀಯ ಮತ್ತು ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಪೂರ್ಣ ಲೇಖನಗಳು, ವಿಶ್ಲೇಷಣೆಗಳು, ಅವಲೋಕನಗಳು ಇರುತ್ತಿದ್ದುವು.

~ ಶ್ರೀರಾಮ ದಿವಾಣ