ಕನ್ನಡ ಪತ್ರಿಕಾ ಲೋಕ (ಭಾಗ ೧೬೬) - ಸೌಹಾರ್ದ

ಕನ್ನಡ ಪತ್ರಿಕಾ ಲೋಕ (ಭಾಗ ೧೬೬) - ಸೌಹಾರ್ದ

ಶಿವಮೊಗ್ಗದಿಂದ ಪ್ರಕಟವಾದ "ಸೌಹಾರ್ದ"

"ಸೌಹಾರ್ದ", ಶಿವಮೊಗ್ಗದಿಂದ ಪ್ರಕಟಗೊಂಡು ರಾಜ್ಯಾದ್ಯಂತ  ಹಂಚಿಕೆಯಾದ ಪತ್ರಿಕೆ. ಮೊದಲ ಸಂಚಿಕೆ ಪ್ರಕಟವಾಗಿದ್ದು 2000ದ ಫೆಬ್ರವರಿಯಲ್ಲಿ. ನೋಂದಣಿಯಾಗದೆ, ಅನಿಯತಕಾಲಿಕ ಪತ್ರಿಕೆ ಎಂದು ಪ್ರಕಟಣೆ ಆರಂಭಿಸಲಾಗಿತ್ತು. ಇದೊಂದು ಸಂಚಿಕೆಯ ಬಳಿಕ "ಸೌಹಾರ್ದ" ವನ್ನು ತ್ರೈಮಾಸಿಕವಾಗಿ ನೋಂದಣಿ ಮಾಡಿಸಲಾಯಿತು. ನೋಂದಣಿಗೊಂಡ ಬಳಿಕದ ಮೊದಲ ಸಂಚಿಕೆ ಪ್ರಕಟವಾಗಿದ್ದು  2001ರಲ್ಲಿ. ಜನವರಿ - ಫೆಬ್ರವರಿ - ಮಾರ್ಚ್ ತಿಂಗಳ ಸಂಚಿಕೆಯಾಗಿ. ನೋಂದಣಿಗೊಂಡ "ಸೌಹಾರ್ದ" ದ ಎರಡನೇ ಸಂಚಿಕೆ ಪ್ರಕಟವಾಗಲೇ ಇಲ್ಲ.

ನ್ಯಾಯವಾದಿ, ಲೇಖಕ ಮತ್ತು ಹೋರಾಟಗಾರರಾಗಿದ್ದ ಶಿವಮೊಗ್ಗದ ವೈ. ಗ. ಜಗದೀಶ್ ಅವರು ಸೌಹಾರ್ದದ ಸಂಪಾದಕರಾಗಿದ್ದರು. ಪ್ರೊ. ರಾಜೇಂದ್ರ ಚೆನ್ನಿ, ಪ್ರೊ. ಹೆಚ್. ರಾಚಪ್ಪ, ಎಸ್. ಸಿರಾಜ್ ಅಹಮದ್,  ಡಾ. ರಾಜಾರಾಂ ಹೆಗಡೆ, ಡಾ. ಶ್ರೀಕಂಠ ಕೂಡಿಗೆ, ಪ್ರೊ. ಜೆ. ಎಸ್. ಸದಾನಂದ ಹಾಗೂ ಹೆಚ್. ಎಸ್. ನಂದಕುಮಾರ್ ಮಾರ್ಗದರ್ಶಕ ಮಾರ್ಗದರ್ಶಕ ಮಂಡಳಿ ಸದಸ್ಯರಾಗಿದ್ದರು.

ಶಿವಮೊಗ್ಗದ ಮುಂಜಾವು ಅಸೋಸಿಯೇಟ್ಸ್ ನಲ್ಲಿ ಡಿಟಿಪಿ ಮಾಡಲಾಗಿತ್ತು. ರೇಣುಕ ಆಫ್ ಸೆಟ್ ನಲ್ಲಿ ಮುದ್ರಣವಾಗಿತ್ತು. 24 ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾದ "ಸೌಹಾರ್ದ"ದ ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿ ಆಗಿತ್ತು. ಬಿ. ಹೆಚ್. ರಸ್ತೆಯ ಮಾರುತಿ ಬಿಲ್ಡಿಂಗ್ ನಲ್ಲಿ ಪತ್ರಿಕಾ ಕಚೇರಿ ಇತ್ತು.

"ಕೋಮುವಾದಕ್ಕೆ ನಮ್ಮ ವಿರೋಧ" ಎಂಬ ಘೋಷಣೆಯೊಂದಿಗೆ ಪ್ರಕಟವಾದ "ಸೌಹಾರ್ದ"ದಲ್ಲಿ ವೈ. ಗ. ಜಗದೀಶರ ಸಂಪಾದಕೀಯ, 'ಶೃಂಗ' ಶೃಂಗೇರಿ, ಎಸ್. ಸಿರಾಜ್ ಅಹಮದ್, ಜಿ. ರಾಜಶೇಖರ್, ಹೆಚ್. ಎಸ್. ನಂದಕುಮಾರ್, ಶಿವಸುಂದರ್, ರಹಮತ್ ತರೀಕೆರೆ, ಹೆಚ್. ಪಟ್ಟಾಭಿರಾಮ ಸೋಮಯಾಜಿ, ಮರ್ಗನಳ್ಳಿ ಪ್ರಕಾಶ್ ಹಾಗೂ ಜ್ಞಾನೇಶ್ ಬೆಂಗಳೂರು ಬರೆಹಗಳು ಪ್ರಕಟವಾಗಿತ್ತು. ಕೋಮುವಾದ ವಿರೋಧಿ ಹೋರಾಟಗಳು, ವಿಚಾರ ಸಂಕಿರಣ ಇತ್ಯಾದಿಗಳ ಚಿತ್ರ ಸಹಿತವಾದ ವರದಿಗಳು  ಪ್ರಕಟವಾಗಿತ್ತು.

~ ಶ್ರೀರಾಮ ದಿವಾಣ