ಕನ್ನಡ ಪತ್ರಿಕಾ ಲೋಕ (ಭಾಗ ೧೬೯) - ಕಲಾದರ್ಶನ

ಕನ್ನಡ ಪತ್ರಿಕಾ ಲೋಕ (ಭಾಗ ೧೬೯) - ಕಲಾದರ್ಶನ

ವಿ. ಬಿ. ಹೊಸಮನೆ ಅವರ "ಕಲಾದರ್ಶನ"

ವಿ. ಬಿ. ಹೊಸಮನೆ ಅವರು ಮಂಗಳೂರಿನ ಕದ್ರಿಯಿಂದ 43 ವರ್ಷಗಳ ಕಾಲ‌ ನಿರಂತರವಾಗಿ ಪ್ರಕಟಿಸಿದ ಮಾಸಪತ್ರಿಕೆ "ಕಲಾದರ್ಶನ". 1971ರ ರಾಮ ನವಮಿಯಂದು ಆರಂಭವಾದ "ಕಲಾದರ್ಶನ" 43 ವರ್ಷ ನಡೆದು ಬಳಿಕ ಸ್ಥಗಿತಗೊಂಡಿತು. ಮಂಗಳೂರಿನ ಕೊಣಾಜೆಯಲ್ಲಿ ಮೂರು ವರ್ಷಗಳ ಹಿಂದೆ ಸ್ಥಾಪನೆಗೊಂಡು ಆರಂಭವಾದ ಸ್ನಾತಕೋತ್ತರ ಕಾಲೇಜಿಲ್ಲಿ (ಮಂಗಳ ಗಂಗೋತ್ರಿ) ಕಲಾದರ್ಶನದ ಮೊದಲ ಸಂಚಿಕೆ (1971 ಎಪ್ರಿಲ್) ಬಿಡುಗಡೆಗೊಂಡಿತು. ಬಿಡುಗಡೆ ಮಾಡಿದವರು ಬಲ್ಮಠದ ಆರ್ಯ ಸಮಾಜ ಸಂಸ್ಥೆಯ ಆಚಾರ್ಯ ವಿಜ್ಞಾನ ಭಿಕ್ಷು ಅವರು. ಅಧ್ಯಕ್ಷತೆ ವಹಿಸಿದವರು ಪ್ರೊ. ಎಸ್. ವಿ. ಪರಮೇಶ್ವರ ಭಟ್ ಅವರು.

"ಸಹಕಾರ - ಸಾಹಿತ್ಯ ಜೀವನ" ಎಂಬ ಮೂಲ ಮಂತ್ರದೊಂದಿಗೆ ಪತ್ರಿಕೆ ನಡೆದುಕೊಂಡು ಬಂತಾದರೂ ಪೋಷಕರ ಸಹಕಾರ ಮತ್ತು ಸಾಹಿತ್ಯ ಸಂಘದ ಮೂಲಕ ಹಾಗೂ ಶಾಶ್ವತ ಠೇವಣಿಯ ಮೂಲಕ ಪತ್ರಿಕೆ ಮುಂದಿನ ದಿನಗಳಲ್ಲಿ ಮುನ್ನಡೆದುಕೊಂಡು ಸಾಗಬೇಕು ಎಂಬ ಸಂಪಾದಕ ವಿ. ಬಿ. ಹೊಸಮನೆಯವರ ಉದ್ಧೇಶ ಮಾತ್ರ ಈಡೇರಲಿಲ್ಲ. 1999ರಲ್ಲಿ ಕಲಾದರ್ಶನ ತನ್ನ ತ್ರಿಂಶತಿ ಉತ್ಸವವನ್ನು ಆಚರಿಸಿತಾದರೂ, ಪತ್ರಿಕೆ ನಂತರ ಹೆಚ್ಚು ಕಾಲ ನಡೆಯಲಿಲ್ಲ.

ವಿ. ಬಿ. ಹೊಸಮನೆಯವರು ಸಂಪಾದಕರು, ಪ್ರಕಾಶಕರು ಮತ್ತು ಮಾಲಕರು ಆಗಿದ್ದ "ಕಲಾದರ್ಶನ" ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿತ್ತು. ಎಂ. ನಾಗರಾಜ ಅವರ ಕರಂಗಲ್ಪಾಡಿಯ ಗಾಯತ್ರಿ ಪ್ರಿಂಟಿಂಗ್ ಪ್ರೆಸ್ ನಲ್ಲಿ ಮುದ್ರಣವಾಗುತ್ತಿತ್ತು. ಆರಂಭದಲ್ಲಿ ಬಿಡಿ ಸಂಚಿಕೆಗೆ ಐದು ರೂಪಾಯಿ ಬೆಲೆ ಇತ್ತು. ಕೊನೆಗೆ ಬಿಡಿ ಸಂಚಿಕೆಯ ಬೆಲೆ ಎಂಟು ರೂಪಾಯಿಗಳಾಗಿ ಹೆಚ್ಚಿಸಲಾಯಿತು. ವಾರ್ಷಿಕ ಚಂದಾ, ಪೋಷಕರು, ಮಹಾ ಪೋಷಕರು ಇತ್ಯಾದಿ ರೂಪದಲ್ಲೂ ಹಣ ಸಂಗ್ರಹಿಸಲಾಗುತ್ತಿತ್ತು.

ಭರದ್ವಾಜ ಪ್ರಕಾಶನದ ಮೂಲಕ ಆರಂಭದ ಮೂರು ದಶಕಕ್ಕೂ ಅಧಿಕ ಕಾಲ ಮಂಗಳೂರಿನಿಂದ ಹೊರ ಬರುತ್ತಿದ್ದ ಕಲಾದರ್ಶನ, ಕೊನೆಗೆ ಸಾಗರದಿಂದ ಪ್ರಕಟವಾಗುತ್ತಿತ್ತು. ಇದಕ್ಕೆ ಕಾರಣ, ಹೊಸಮನೆಯವರು ತಮ್ಮ ವಾಸ್ತವ್ಯವವನ್ನು ಮಂಗಳೂರಿನಿಂದ ಸಾಗರಕ್ಕೆ ಬದಲಾಯಿಸಿದ್ದಾಗಿದೆ. ಸಾಹಿತ್ಯ, ಸಂಸ್ಕೃತಿ, ಕಲೆ, ಶಿಕ್ಷಣ, ಧಾರ್ಮಿಕ, ಸಾಮಾನ್ಯ ಜ್ಞಾನ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಕಲಾದರ್ಶನದಲ್ಲಿ ಪ್ರಕಟವಾಗುತ್ತಿದ್ದುವು. ಸಂಪಾದಕರಾದ ವಿ. ಬಿ. ಹೊಸಮನೆಯವರು ತಮ್ಮ ಭಾರದ್ವಾಜ ಪ್ರಕಾಶನದ ಮೂಲಕ "ಕಲಾದರ್ಶನ" ಮಾಸ ಪತ್ರಿಕೆಯನ್ನಲ್ಲದೆ ನೂರಕ್ಕೂ ಅಧಿಕ ಹವ್ಯಕ ಮತ್ತು ಕನ್ನಡ ಸಾಹಿತ್ಯ ಕೃತಿಗಳನ್ನು ಪ್ರಕಾಶನಗೊಳಿಸಿದ್ದಾರೆ.

ದಿವಂಗತ ವಿ. ಬಿ. ಹೊಸಮನೆಯವರ "ಕಲಾದರ್ಶನ" ಇದೀಗ ಮತ್ತೆ ಆರಂಭಗೊಂಡಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಾದಿಗಲ್ಲು ಲಕ್ಷ್ಮೀನಾರಾಯಣ (ಪ್ರಧಾನ ಸಂಪಾದಕ) ಹಾಗೂ ಹನಿಯ ರವಿ (ಸಂಪಾದಕ) ಬಳಗ ಮತ್ತೆ ಹೊರಗೆ ತರುತ್ತಿದ್ದಾರೆ. ವರ್ಷಗಳ ಹಿಂದೆ "ಕಲಾದರ್ಶನ" ಎಂದೇ ಮಾಸಪತ್ರಿಕೆ ಆರಂಭಿಸಿದ ಇವರು, ಇದೀಗ "ಕಾರಣಗಿರಿ ಕಲಾದರ್ಶನ" ಎಂಬ ಹೆಸರಿನಲ್ಲಿ ನೋಂದಾಯಿಸಿಕೊಂಡು ಪ್ರಕಟಿಸುತ್ತಿದ್ದಾರೆ. ಹೆಚ್. ರಾಮಚಂದ್ರ ಜೋಯ್ಸ್, ದಿವಾಕರ ಶ್ರೀನಿವಾಸಪುರ, ರಾಮಚಂದ್ರ ಹೊರಣೆಬೈಲು, ಶ್ರೀಮತಿ ವಸುಧಾ ಚೈತನ್ಯ, ರಾ. ನಾಗರಾಜ ರಾವ್, ಕೆ. ಪಿ. ಕೃಷ್ಣಮೂರ್ತಿ, ವಿನಾಯಕ ಪ್ರಭು ವಾರಂಬಳ್ಳಿ, ರಂಜೀತಸಿಂಗ ರಜಪೂತ ಹಾಗೂ ಅಶ್ವಿನ್ ಅನಂತರಾಮ್ "ಕಲಾದರ್ಶನ ಬಳಗ"ದಲ್ಲಿದ್ದಾರೆ. 40 ಪುಟಗಳ ಮಾಸಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ 15 ರೂಪಾಯಿಗಳು. 

~ ಶ್ರೀರಾಮ ದಿವಾಣ