ಕನ್ನಡ ಪತ್ರಿಕಾ ಲೋಕ (ಭಾಗ ೧೭೧) - ಸ್ಥಿತಿ ಗತಿ
ಡಾ | ಎನ್. ಭಾಸ್ಕರ ಆಚಾರ್ಯರ "ಸ್ಥಿತಿ ಗತಿ"
ಕೋಟೇಶ್ವರದ ಡಾ | ಎನ್. ಆರ್. ಆಚಾರ್ಯ ಮೆಮೋರಿಯಲ್ ಹಾಸ್ಪಿಟಲ್ ನ ಆಡಳಿತ ನಿರ್ದೇಶಕರೂ, ಖ್ಯಾತ ವೈದ್ಯರೂ, ಲೇಖಕರೂ ಆಗಿರುವ ಡಾ. ಎನ್. ಭಾಸ್ಕರ ಆಚಾರ್ಯ ಅವರು ತಮ್ಮ "ಡಾ | ಎನ್. ಆರ್. ಎ. ಎಂ. ಎಚ್. ಪ್ರಕಾಶನ"ದ ಮೂಲಕ ದಶಕಕ್ಕೂ ಅಧಿಕ ಕಾಲದಿಂದ ನಡೆಸಿಕೊಂಡು ಬರುತ್ತಿರುವ ದ್ವಿಭಾಷಾ ತ್ರೈಮಾಸಿಕ "ಸ್ಥಿತಿ ಗತಿ".
ಮೊದಲ ಸಂಚಿಕೆ, 2010ರ ಅಕ್ಟೋಬರ್ - ನವೆಂಬರ್ - ಡಿಸೆಂಬರ್ ತಿಂಗಳುಗಳ ಸಂಚಿಕೆಯಾಗಿ ಮೂಡಿ ಬಂತು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ವೈವಿಧ್ಯಮಯ ಬರೆಹಗಳೊಂದಿಗೆ ಪ್ರಕಟವಾಗುತ್ತಿದ್ದ "ಸ್ಥಿತಿ ಗತಿ"ಯು 204 ಪುಟಗಳ ಪುಸ್ತಕವಾಗಿತ್ತು.
'ಸಾಹಿತ್ಯ - ಕಲೆ - ಸಂಸ್ಕೃತಿಗೊಂದು ಕೈಗನ್ನಡಿ' ಎಂಬ ಘೋಷಣೆಯೊಂದಿಗೆ ಪ್ರಕಟವಾಗುತ್ತಿದ್ದ "ಸ್ಥಿತಿ ಗತಿ" ಯ ಸಂಪಾದಕರು ಡಾ | ಎನ್. ಭಾಸ್ಕರ ಆಚಾರ್ಯ. ಪ್ರಕಾಶಕಿ ಡಾ | ಸಬಿತಾ ಆಚಾರ್ಯ. ಮುನಿಯಾಲು ಗಣೇಶ್ ಶೆಣೈಯವರು ಮುದ್ರಕರು. ಕುಂದಾಪುರದ "ಪುಸ್ತಕ ನಿಧಿ"ಯಲ್ಲಿ ಮುದ್ರಣವಾಗುತ್ತಿತ್ತು. ಶ್ರೀಲಕ್ಷ್ಮಿ ಡಿಟಿಪಿ ಮಾಡಿಕೊಡುತ್ತಿದ್ದರು. ಉಷಾ ಬಿ. ರಕ್ಷಾಪುಟಗಳ ವಿನ್ಯಾಸಕರಾಗಿದ್ದರು. ಪುಸ್ತಕ ಪರಿಚಯ, ವಿಮರ್ಶೆ, ಲಲಿತ ಪ್ರಬಂಧ, ಕಥೆ, ಕವಿತೆ, ಧಾರಾವಾಹಿ, ವೈದ್ಯಕೀಯ, ಪ್ರವಾಸ, ಧಾರ್ಮಿಕ, ವೈಚಾರಿಕ, ಸಂಶೋಧನಾ ಬರಹಗಳ ಸಹಿತ ವೈವಿಧ್ಯಮಯ ಬರಹಗಳು " ಸ್ಥಿತಿ ಗತಿ"ಯಲ್ಲಿ ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ