ಕನ್ನಡ ಪತ್ರಿಕಾ ಲೋಕ (ಭಾಗ ೧೭೨) - ಕೂಟವಾಣಿ

ಕನ್ನಡ ಪತ್ರಿಕಾ ಲೋಕ (ಭಾಗ ೧೭೨) - ಕೂಟವಾಣಿ

ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆಯ "ಕೂಟವಾಣಿ"

ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಕೇಂದ್ರ ಸಂಸ್ಥೆಯನ್ನು ಹೊಂದಿರುವ ಕೂಟ ಮಹಾಜಗತ್ತು (ರಿ) ಇದರ ಮಂಗಳೂರು ಅಂಗಸಂಸ್ಥೆಯು ಪ್ರಕಟಿಸುತ್ತಿರುವ ಪತ್ರಿಕೆ "ಕೂಟವಾಣಿ". 2007ರ ಮಾರ್ಚ್ ತಿಂಗಳಲ್ಲಿ ಮಾಸ ಪತ್ರಿಕೆಯಾಗಿ ಆರಂಭವಾದ " ಕೂಟವಾಣಿ", 2023ರ ಅಕ್ಟೋಬರ್ ನಿಂದ ದ್ವೈಮಾಸಿಕವಾಗಿ ಬದಲಾಗಿ ಮುಂದುವರಿದಿದೆ.

ಕೂಟವಾಣಿಯ ಮೊದಲ ಪ್ರಧಾನ ಸಂಪಾದಕರಾಗಿದ್ದವರು ಮಂಗಳೂರು ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ನ ಕನ್ನಡ ಉಪನ್ಯಾಸಕರೂ, ಬಸ್ರೂರು ಶಾರದಾ ಕಾಲೇಜಿನ ಪ್ರಾಂಶುಪಾಲರೂ, ಹಿರಿಯ ಬರಹಗಾರರೂ ಆದ "ಪಾ. ನ. ಮಯ್ಯ" ಎಂದೇ ಖ್ಯಾತರಾದ ಡಾ. ಪಾರಂಪಳ್ಳಿ ನರಸಿಂಹ ಮಯ್ಯ ಅವರು. ಇವರ ನಂತರ ಸುಧೀರ್ಘ ಕಾಲ, ಅಂದರೆ ದಶಕಕ್ಕೂ ಅಧಿಕ ಕಾಲ ಪ್ರಧಾನ ಸಂಪಾದಕರಾಗಿದ್ದವರು ಹಿರಿಯ ಲೇಖಕರೂ, ಯಕ್ಷಗಾನ ಪ್ರಸಂಗಕರ್ತರೂ, ಅರ್ಥಧಾರಿಗಳೂ, ನಾಟಕ ನಿರ್ದೇಶಕರೂ ಆದ ಮಂಗಳೂರಿನ ಪೊಳಲಿ ನಿತ್ಯಾನಂದ ಕಾರಂತ ಅವರು. 2023ರಿಂದ ಹಿರಿಯ ಲೇಖಕರೂ, ಅಂಕಣಕಾರರೂ, ಗ್ರಾಹಕಪರ ಹೋರಾಟಗಾರರೂ, ಸಾವಯವ ಕೃಷಿತಜ್ಞರೂ, ತರಬೇತುದಾರರೂ ಆದ ಅಡ್ಡೂರು ಕೃಷ್ಣ ರಾವ್ ಅವರು ಪ್ರಧಾನ ಸಂಪಾದಕರಾಗಿ ಮುನ್ನಡೆಸುತ್ತಿದ್ದಾರೆ.

ಕೂಟ ಮಹಾಜಗತ್ತು ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷರಾಗಿರುವವರು "ಕೂಟವಾಣಿ"ಯ ಗೌರವ ಸಂಪಾದಕರಾಗಿರುತ್ತಾರೆ. ಪ್ರಸ್ತುತ ಶ್ರೀಧರ ಹೊಳ್ಳ ಅವರು ಗೌರವ ಸಂಪಾದಕರಾಗಿದ್ದಾರೆ. ಪೊಳಲಿ ನಿತ್ಯಾನಂದ ಕಾರಂತ, ಗೋಪಾಲಕೃಷ್ಣ ಮಯ್ಯ, ರವಿಚಂದ್ರಹೊಳ್ಳ ಹಾಗೂ ಪಿ. ಕೃಷ್ಣ ಮಯ್ಯ ಇವರು ಸಂಪಾದಕೀಯ ಮಂಡಳಿ ಸದಸ್ಯರಾಗಿದ್ದಾರೆ.

ಈ ಹಿಂದೆ ಪಿ. ಶೇಷಗಿರಿ ರಾವ್ ಗೌರವ ಸಂಪಾದಕರಾಗಿದ್ದರೆ, ಎಂ. ಶ್ರೀಧರ ಮಯ್ಯ, ಎ. ಪರಮೇಶ್ವರ ನಾವಡ, ಕೆ. ಕೃಷ್ಣ ರಾವ್, ಶ್ರೀಮತಿ ಸುಕನ್ಯಾ ಹೆಬ್ಬಾರ್ ಮುಂತಾದವರು ಸಂಪಾದಕೀಯ ಮಂಡಳಿ ಸದಸ್ಯರಾಗಿದ್ದರು. ಹದಿನಾರು ಪುಟಗಳ, ಐದು ರೂಪಾಯಿ ಬೆಲೆಯ ಕೂಟವಾಣಿ ಮಂಗಳೂರು ಕರಂಗಲ್ಪಾಡಿಯ ಗಾಯತ್ರಿ ಪ್ರಿಂಟಿಂಗ್ ಪ್ರೆಸ್ ನಲ್ಲಿ ಮುದ್ರಣವಾಗುತ್ತಿದೆ.

ಖ್ಯಾತ ಬರಹಗಾರರುಗಳಾದ ಡಾ. ಗುಂಡ್ಮಿ ಭಾಸ್ಕರ ಮಯ್ಯ, ಡಾ. ಜಿ. ಕೆ. ಸುಧಾಕರ್, ಪಚ್ಚನಾಡಿ ಕೇಶವ ರಾವ್, ವೈ. ಎಸ್. ವೆಂಕಟೇಶಮೂರ್ತಿ ಭಟ್ಟ, ಸತ್ಯನಾರಾಯಣ ಭಟ್ರಕೋಡಿ, ಗೋಪಾಡಿ ವಾಗ್ದೇವಿಸುತ, ಜನಾರ್ದನ ಹಂದೆ, ವಾಗೀಶ್ವರೀ ಶಿವರಾಮ, ಪಿ. ಶ್ರೀಧರ ಐತಾಳ, ಕೊ. ರಾಘವ ಮಯ್ಯ, ಲತಾ ರಾವ್, ರಾಜಲಕ್ಷ್ಮಿ ಬಿಜೈ, ಸುಕನ್ಯಾ ಹೆಬ್ಬಾರ್, ಮೀನಾಕ್ಷಿ ಆರ್. ಬಿ., ವಿ. ಶಾರದಾ, ನೂಯಿ ಬಾಲಕೃಷ್ಣ ರಾವ್, ಡಾ. ಎಚ್. ವಿ. ನರಸಿಂಹಮೂರ್ತಿ, ವಿಶ್ವಂಭರ ಉಪಾಧ್ಯಾಯ, ಲಲಿತಾ ಉಪಾಧ್ಯಾಯ, ಲೀಲಾ ರಾವ್, ಡಾ. ಎಚ್. ಎನ್. ವೆಂಕಟೇಶ ಪ್ರಸನ್ನ, ಉಮಾ ದಿವಾಕರ, ತೋಟದೂರು ಸೀತಾರಾಮ ಹೆಬ್ಬಾರ, ಜಿ. ಅನಂತಯ್ಯ ಹಂದೆ, ಸಾವಿತ್ರಿ ಹೊಳ್ಳ, ಪಿ. ವಿ. ಮಯ್ಯ, ಹರಿಕೃಷ್ಣ ಉರಾಳ, ಎ. ಪರಮೇಶ್ವರ ನಾವಡ, ಕೆ. ಪಿ. ಅಶ್ವಿನ್ ರಾವ್ ಪದವಿನಂಗಡಿ ಮೊದಲಾದವರು "ಕೂಟವಾಣಿ"ಗೆ ಬರೆಯುತ್ತಿದ್ದರು.

" ಕೂಟವಾಣಿ"ಯಲ್ಲಿ ಸಮುದಾಯದ ಸುದ್ಧಿಗಳ ಜೊತೆಗೆ ಧಾರ್ಮೀಕ, ಸಾಂಸ್ಕೃತಿಕ, ಸಾಮಾಜಿಕ, ವೈಜ್ಞಾನಿಕ, ವೈಚಾರಿಕ, ವೇದ, ಉಪನಿಷತ್ತು, ಪುರಾಣ, ವ್ಯಕ್ತಿತ್ವ ವಿಕಸನ ಹೀಗೆ ವೈವಿಧ್ಯಮಯ ಬರಹಗಳು ಪ್ರಕಟವಾಗುತ್ತಿತ್ತು.

-ಶ್ರೀರಾಮ ದಿವಾಣ