ಕನ್ನಡ ಪತ್ರಿಕಾ ಲೋಕ (ಭಾಗ ೧೭೮) - ಕಾನೂನು ಲೋಕ

ಕನ್ನಡ ಪತ್ರಿಕಾ ಲೋಕ (ಭಾಗ ೧೭೮) - ಕಾನೂನು ಲೋಕ

ಹರೀಶ್ ಆಳ್ವರ "ಕಾನೂನು ಲೋಕ"

ಪತ್ರಕರ್ತ, ಲೇಖಕ, ತುಳು ಸಂಸ್ಕೃತಿ ಚಿಂತಕ, ನ್ಯಾಯವಾದಿ, ಜನಪರ ಹೋರಾಟಗಾರ ದಕ್ಷಿಣ ಕನ್ನಡ ಜಿಲ್ಲೆ ಮುಡಿಪುವಿನ ಹರೀಶ್ ಆಳ್ವ ಎಂ. ಜಿ. ಮೂಳೂರುಗುತ್ತು ಅವರು ಸಂಪಾದಕರು ಮತ್ತು ಪ್ರಕಾಶಕರಾಗಿ ಎರಡು ವರ್ಷಗಳ ಕಾಲ ಮಂಗಳೂರಿನಿಂದ ಹೊರತರುತ್ತಿದ್ದ ಮಾಸಪತ್ರಿಕೆ "ಕಾನೂನು ಲೋಕ".

2001ರ ಜನವರಿ ತಿಂಗಳ ಸಂಚಿಕೆ "ಕಾನೂನು ಲೋಕ" ದ ಮೊದಲ ಸಂಚಿಕೆ. ಮಂಗಳೂರು ನಗರದ ಜನತಾ ಡಿಲಕ್ಸ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಬಿ. ಸದಾನಂದ ಪೂಂಜಾ ಅವರು ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿದ್ದ ರಾಜೇಂದ್ರ ಶೆಟ್ಟಿ ಹಾಗೂ ಖ್ಯಾತ ನ್ಯಾಯವಾದಿಗಳಾಗಿದ್ದ ಟಿ. ಎನ್. ಪೂಜಾರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೆ. ಎನ್. ಶೆಟ್ಟಿ ವ್ಯವಸ್ಥಾಪಕ ಸಂಪಾದಕರಾಗಿದ್ದರು. ಬಿ. ತಾನೋಜಿ ರಾವ್ ಗೌರವ ಸಂಪಾದಕರಾಗಿದ್ದರು. ಕು. ಆಶಾಮಣಿ ಬಂಟ್ವಾಳ, ಪುಷ್ಪರಾಜ ಎಂ. ಜಿ., ಜೆ. ಎಂ. ಡಿಸಿಲ್ವಾ, ಜನಾರ್ದನ ಆಚಾರ್ಯ, ಜಗನ್ನಾಥ ಕಾವೂರು, ಸುಭಾಷ್ ರೈ ಬೆಂಗಳೂರು, ಅಬ್ದುಲ್ ಸಲಾಂ ಉಡುಪಿ, ಚಿತ್ತರಂಜನ್ ಶೆಟ್ಟಿ ಕಲ್ಲಡ್ಕ ಹಾಗೂ ಹಮೀದ್ ಮುದುಂಗಾರುಕಟ್ಟೆ ಸಂಪಾದಕೀಯ ಮಂಡಳಿಯ ಸದಸ್ಯರಾಗಿದ್ದರು. 

ಟ್ಯಾಬ್ಲಾಯ್ಡ್ ರೂಪದಲ್ಲಿ ಬರುತ್ತಿದ್ದ 12 ಪುಟಗಳ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿಗಳಾಗಿತ್ತು. ಮಂಗಳೂರು ನಗರದ ಲೈಟ್ ಹೌಸ್ ಹಿಲ್ ನ ಹಿಲ್ ಸೈಡ್ ನಲ್ಲಿ ಪತ್ರಿಕಾಲಯವಿತ್ತು. ನಗರದ ಪ್ರಸಾದ್ ಪ್ರಿಂಟರ್ಸ್ ನಲ್ಲಿ ಕಾನೂನು ಲೋಕ ಮುದ್ರಣವಾಗುತ್ತಿತ್ತು. ನ್ಯಾಯವಾದಿ ಕೆ. ಚಂದ್ರಶೇಖರ ಹೊಳ್ಳ, ಬಳಕೆದಾರರ ಪರ ಹೋರಾಟಗಾರ, ಪ್ರಗತಿಪರ ಕೃಷಿಕರಾದ ಅಡ್ಡೂರು ಕೃಷ್ಣ ರಾವ್, ದಿನೇಶ್ ಪಣಿಕ್ಕರ್ ಬಾಳೆಪುಣಿ ಮುಂತಾದವರ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುವು.

~ ಶ್ರೀರಾಮ ದಿವಾಣ