ಕನ್ನಡ ಪತ್ರಿಕಾ ಲೋಕ (ಭಾಗ ೧೭೯) - ಹವ್ಯಕ ಶ್ರೀ ಬನಶಂಕರಿ
ಡಾ. ಗಿರೀಶ್ ಕೆ. ದೈಗೋಳಿ ಅವರ "ಹವ್ಯಕ ಶ್ರೀ ಬನಶಂಕರಿ"
ಬೆಂಗಳೂರು ಪಂತರಪಾಳ್ಯದಲ್ಲಿ ಆಯುರ್ವೇದ ವೈದ್ಯರಾಗಿ ಮತ್ತು ಆರೋಗ್ಯ ವಿಮೆಯ ಮಾರ್ಗದರ್ಶಕರಾಗಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದ, ಮೂಲತಹ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ದೈಗೋಳಿಯವರಾದ ಡಾ || ಗಿರೀಶ್ ಕೆ. ದೈಗೋಳಿ ಅವರು ಎರಡೂವರೆ ವರ್ಷಗಳ ಕಾಲ ನಡೆಸಿದ ತ್ರೈಮಾಸಿಕವಾಗಿದೆ "ಹವ್ಯಕ ಶ್ರೀ ಬನಶಂಕರಿ".
ಪತ್ರಿಕೆಯ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರು ಗಿರೀಶ್ ದೈಗೋಳಿಯವರೇ ಆಗಿದ್ದರು. ಬೆಂಗಳೂರು ಪಂತರಪಾಳ್ಯದ ಹೆಚ್. ಬಿ. ಸಿ. ಎಸ್. ಲೇಔಟ್ ನಲ್ಲಿ ಪತ್ರಿಕಾಲಯವಿತ್ತು. ಶುಭ ಡಿಸೈನ್ ನಲ್ಲಿ ಮುಖಪುಟದ ವಿನ್ಯಾಸ ಮಾಡಲಾಗುತ್ತಿತ್ತು. ಶೋಭಾ ಎಚ್. ರಾವ್ ಅವರು ಪತ್ರಿಕೆಯ ಡಿಟಿಪಿ ಕೆಲಸ ಮಾಡಿಕೊಡುತ್ತಿದ್ದರು. 28 ಪುಟಗಳ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ 30 ರೂಪಾಯಿಗಳಾಗಿತ್ತು. ವಾರ್ಷಿಕ ಚಂದಾ ಮೊತ್ತ 100 ರೂಪಾಯಿಗಳಾಗಿತ್ತು.
2016ರ ಜನವರಿ - ಫೆಬ್ರವರಿ - ಮಾರ್ಚ್, " ಹವ್ಯಕ ಶ್ರೀ ಬನಶಂಕರಿ"ಯ ಮೊದಲ ತ್ರೈಮಾಸಿಕ ಸಂಚಿಕೆಯಾದರೆ, 2018ರ ಜೂನ್ ತಿಂಗಳಲ್ಲಿ ಪ್ರಕಟವಾದ ಸಂಚಿಕೆ ಪತ್ರಿಕೆಯ ಕೊನೆಯ ಸಂಚಿಕೆಯಾಗಿದೆ. ಕೆ. ರಘುರಾಮ ಭಟ್ ಉಡುಪುಮೂಲೆ, ಶ್ರೀಮತಿ ಜಯಾ ಭಟ್ ಬೆಂಗಳೂರು, ಡಾ || ಈಶ್ವರ ಪ್ರಸಾದ್ ಅಲಂಗಾರು, ಗಣೇಶ್ ಭಟ್ ಚಾಮರಾಜನಗರ, ರಘು ಮುಳಿಯ ಬೆಂಗಳೂರು, ನಾರಾಯಣ ಶಾನಭಾಗ ಬೆಂಗಳೂರು, ಡಾ || ಲಕ್ಷ್ಮೀ ಜಿ. ಪ್ರಸಾದ ಬೆಂಗಳೂರು, ಜಯಂತ್ ಪಿ. ಹೆಗಡೆ, ಡಾ|| ಸುರೇಶ ನೆಗಳಗುಳಿ ಮಂಗಳೂರು, ಪಿ. ವಿ. ಹೆಗಡೆ ಬೆಂಗಳೂರು, ಶ್ರೀಮತಿ ಅನುಪಮಾ ರಾಘವೇಂದ್ರ ಉಡುಪುಮೂಲೆ, ಜಯದೇವ ಮಾಣಿಲ ಬೆಂಗಳೂರು, ರಾಜಗೋಪಾಲ್ ಕನ್ಯಾನ, ಕೀರಿಕ್ಕಾಡು ವನಮಾಲ ಕೇಶವ ಭಟ್ಟ, ಎಮ್. ಎನ್. ಭಟ್ ಮದ್ಗುಣಿ, ಶ್ರೀಮತಿ ಹೇಮಾವತಿ ಪಜಿಲ, ವಳಕ್ಕುಂಜ ಸೂರ್ಯನಾರಾಯಣ ಭಟ್ ಪೊಟ್ಟಿಪ್ಪಲ, ಶ್ರೀಮತಿ ಶಶಿಕಲಾ ಜಿ ಭಟ್ ನೆಲ್ಲೂರು, ವಿ. ಬಿ. ಅರ್ತಿಕಜೆ, ವೇ | ಮೂ | ಪರಕ್ಕಜೆ ಸೂರ್ಯನಾರಾಯಣ ಭಟ್ಟ ಬೆಂಗಳೂರು ಮುಂತಾದವರ ಬರಹಗಳು " ಹವ್ಯಕ ಶ್ರೀ ಬನಶಂಕರಿ"ಯಲ್ಲಿ ಪ್ರಕಟವಾಗಿವೆ.
~ ಶ್ರೀರಾಮ ದಿವಾಣ