ಕನ್ನಡ ಪತ್ರಿಕಾ ಲೋಕ (ಭಾಗ ೧೮೮) - ಜನವಾಹಿನಿ

ಕನ್ನಡ ಪತ್ರಿಕಾ ಲೋಕ (ಭಾಗ ೧೮೮) - ಜನವಾಹಿನಿ

ಜನಮಾಧ್ಯಮ ಪ್ರಕಾಶನ ಪಬ್ಲಿಕ್ ಲಿಮಿಟೆಡ್ ನ "ಜನವಾಹಿನಿ"

ಹಲವಾರು ಜನರ ಪಾಲು ಬಂಡವಾಳದಲ್ಲಿ ಸ್ಥಾಪನೆಗೊಂಡ "ಜನಮಾಧ್ಯಮ ಪ್ರಕಾಶನ" ಎಂಬ ಪಬ್ಲಿಕ್ ಲಿಮಿಟೆಡ್ ಸಂಸ್ಥೆಯು ಹೊರತಂದ ದಿನಪತ್ರಿಕೆಯಾಗಿದೆ "ಜನವಾಹಿನಿ". 1998ರ ಮೇ ತಿಂಗಳಲ್ಲಿ ಆರಂಭಗೊಂಡ ಜನವಾಹಿನಿ, 2003ರ ವರೆಗೆ ಐದು ವರ್ಷಗಳ ಕಾಲ ನಡೆದು ಕರಾವಳಿ ಕರ್ನಾಟಕದಾದ್ಯಂತ ಉತ್ತಮ ಹೆಸರು ಪಡೆಯಿತಾದರೂ ವಿವಿಧ ಕಾರಣಗಳಿಂದಾಗಿ ಕೊನೆಗೆ ಸ್ಥಗಿತಗೊಂಡಿತು.

ಫಾ | ಸಾಮ್ಯುವೆಲ್ ಸಿಕ್ವೇರಾ ಜನಮಾಧ್ಯಮ ಪ್ರಕಾಶನದ ಆಡಳಿತ ನಿರ್ದೇಶಕರಾಗಿದ್ದರು. ರೊನಾಲ್ಡ್ ಕುಲಾಸೋ ಸಹಿತ ಇತರ ಕೆಲ ಪ್ರಮುಖ ಉದ್ಯಮಿಗಳು ನಿರ್ದೇಶಕರಾಗಿದ್ದರು. ಸಾಮ್ಯುವೆಲ್ ಸಿಕ್ವೇರಾ ಪ್ರಧಾನ ಸಂಪಾದಕರೂ ಆಗಿದ್ದರು. ಹಿರಿಯ ಪತ್ರಕರ್ತರಾದ ಬಾಲಕೃಷ್ಣ ಗಟ್ಟಿ, ಆತ್ರಾಡಿ ಸಂತೋಷ್ ಹೆಗ್ಡೆ, ಪಾರ್ಥಸಾರಥಿ, ನಿಖೀಲ್ ಕೋಲ್ಪೆ, ಬಿ. ಬಿ. ಶೆಟ್ಟಿಗಾರ್, ರಾಜೇಶ್ ಮೂಲ್ಕಿ, ವಿಜಯಲಕ್ಷ್ಮಿ ಶಿಬರೂರು, ಬಿ. ಎಂ. ಬಶೀರ್, ಸತ್ಯಾ, ಪುಷ್ಪರಾಜ್ ಬಿ. ಎನ್. ಹೀಗೆ ಹಲವಾರು ಮಂದಿ ಪತ್ರಕರ್ತರು ಜನವಾಹಿನಿ ಬಳಗದಲ್ಲಿ ಸೇವೆ ಸಲ್ಲಿಸಿದ್ದರು.

ಪತ್ರಿಕೆಯ ಉಡುಪಿ ಕಚೇರಿ ನಗರದ ಕೋರ್ಟ್ ರಸ್ತೆಯ ಲಿಯೋ ಸೆಂಟರ್ ನ ಎರಡನೇ ಮಹಡಿಯಲ್ಲಿತ್ತು. ಕ್ರಾಸ್ತಾ ಕಾಸರಗೋಡು, ಜಯಂತ್ ಪಡುಬಿದ್ರಿ ವರದಿಗಾರರಾಗಿದ್ದರು. ಸುಧಾಕರ ಪೂಜಾರಿ ಮೂಡುಬೆಳ್ಳೆ ಪ್ರಸರಣ ವಿಭಾಗದಲ್ಲಿದ್ದರು. 12 ಪುಟಗಳ ಜನವಾಹಿನಿಯ ಬಿಡಿ ಸಂಚಿಕೆಯ ಬೆಲೆ ಎರಡು ರೂಪಾಯಿಗಳಾಗಿತ್ತು. ಸಂಪಾದಕೀಯವಿತ್ತು. "ದೃಷ್ಟಿಕೋನ" ಎಂಬ ಶೀರ್ಷಿಕೆಯಡಿಯಲ್ಲಿ ನಾಡಿನ ವಿವಿಧ ಲೇಖಕರ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಹಿತ ವಿವಿಧ ವಿಷಯಗಳಿಗೆ ಸಂಬಂಧಿಸಿದ ವಿಶ್ಲೇಷಣಾತ್ಮಕ ಲೇಖನಗಳು ಪ್ರಕಟವಾಗುತ್ತಿತ್ತು.

~ ಶ್ರೀರಾಮ ದಿವಾಣ