ಕನ್ನಡ ಪತ್ರಿಕಾ ಲೋಕ (ಭಾಗ ೧೯೦) - ಸತ್ಯ ಘಟನೆಗಳ ಕ್ರೈಂ ನ್ಯೂಸ್

ಕನ್ನಡ ಪತ್ರಿಕಾ ಲೋಕ (ಭಾಗ ೧೯೦) - ಸತ್ಯ ಘಟನೆಗಳ ಕ್ರೈಂ ನ್ಯೂಸ್

ಅಶೋಕ್ ಬಗಂಬಿಲ ಅವರ "ಸತ್ಯ ಘಟನೆಗಳ ಕ್ರೈಂ ನ್ಯೂಸ್"

ರಂಗಭೂಮಿ ನಟ, ನಿರ್ದೇಶಕ, ಖ್ಯಾತ ಕ್ರೈಂ ಪತ್ರಕರ್ತ ದಕ್ಷಿಣ ಕನ್ನಡದ ಅಶೋಕ್ ಬಗಂಬಿಲ ಅವರು ದಶಕಕ್ಕೂ ಅಧಿಕ ಕಾಲ ರಾಜ್ಯ ಮಟ್ಟದಲ್ಲಿ ನಡೆಸಿದ ಪಾಕ್ಷಿಕ ಪತ್ರಿಕೆಯಾಗಿದೆ "ಸತ್ಯ ಘಟನೆಗಳ ಕ್ರೈಂ ನ್ಯೂಸ್". 2000 - 01ರ ಅವಧಿಯಲ್ಲಿ ಆರಂಭಿಸಿದ ಕ್ರೈಂ ನ್ಯೂಸ್ ನ್ನು ಅಂದಾಜು 2014ರ ವರೆಗೂ, ಅಂದರೆ ನಿಧನರಾಗುವವರೆಗೂ ಅವರು ಪ್ರಕಟಿಸುತ್ತಾ ಬಂದಿದ್ದರು.

ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಜಿಲ್ಲಾ ಜಿಲ್ಲಾ ಮಟ್ಟದ ರಾಜಕೀಯ ಮತ್ತು ಅಪರಾಧ ಸಂಬಂಧಿ ಸುದ್ಧಿಗಳು, ವಿಶ್ಲೇಷಣೆಗಳನ್ನು ಕ್ರೈಂ‌ ನ್ಯೂಸ್ ನಲ್ಲಿ ಮೊದಲ ಆದ್ಯತೆಯಲ್ಲಿ ಪ್ರಕಟಿಸುತ್ತಿದ್ದರು. ಪತ್ರಿಕೆಯಲ್ಲಿ ಕೆಲವೊಂದು ಅಪರೂಪದ (ಉದಾಹರಣೆಗೆ: ಓ ಗೆಳತಿ ನೀನೇಕೆ ಅಳುತಿ..., ಎಲೈ ನಾರಿ ನಾ ಬಿದ್ದೆ ಜಾರಿ..‌ ಮತ್ತು ಸುಂದರಿಯರ ಕಥೆ - ವ್ಯಥೆ !) ಕಾಲಂಗಳು ಇದ್ದುವು. ಇವುಗಳು ಅಪಾರ ಓದುಗರನ್ನು ಗಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದುವು. ಟ್ಯಾಬ್ಲಾಯ್ಡ್ ರೂಪದಲ್ಲಿ 16 ಪುಟಗಳಲ್ಲಿ ಬರುತ್ತಿದ್ದ ಕ್ರೈಂ‌ ನ್ಯೂಸ್ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಎಂಟು ರೂಪಾಯಿಗಳಾಗಿತ್ತು.

ಬೆಂಗಳೂರು ರಾಜಾಜಿನಗರದಲ್ಲಿ ಪತ್ರಿಕಾ ಕಾರ್ಯಾಲಯ ಹೊಂದಿದ್ದ ಅಶೋಕ್ ಬಗಂಬಿಲ ಅವರು ಇತರ ಕೆಲವು ಪತ್ರಿಕೆಗಳಿಗೂ ಪತ್ರಿಕಾ ಸಂಪಾದಕರ ಕೋರಿಕೆಯ ಮೇರೆಗೆ ವಿಶೇಷ ಕ್ರೈಂ ಬರಹಗಳನ್ನು ಬರೆದುಕೊಡುತ್ತಿದ್ದು, ಖ್ಯಾತರಾಗಿದ್ದರು.

~ ಶ್ರೀರಾಮ ದಿವಾಣ