ಕನ್ನಡ ಪತ್ರಿಕಾ ಲೋಕ (ಭಾಗ ೧೯೨) - ಹುಭಾಶಿಕ
ಬೆಳುವಾಯಿ ಶೇಖರ, ಬಜಪೆ ಅವರ "ಹುಭಾಶಿಕ"
ಲೇಖಕ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರರ, ಕೊರಗ ಸಮುದಾಯದ ಮುಂದಾಳು ಬಜಪೆ ನಿವಾಸಿ ಬೆಳುವಾಯಿ ಶೇಖರ ಅವರು ಸುಮಾರು ಐದು ವರ್ಷಗಳ ಕಾಲ ಪ್ರಕಟಿಸಿದ ಖಾಸಗಿ ತ್ರೈಮಾಸಿಕ "ಹುಭಾಶಿಕ". 2007ರ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾದ "ಹುಭಾಶಿಕ" 2012ರ ವರೆಗೆ ಪ್ರಕಟವಾಗುತ್ತಾ ಬಂದು ನಂತರ ಸ್ಥಗಿತಗೊಂಡಿತು. ಪತ್ರಿಕೆಯ ಸಂಪಾದಕರು, ಪ್ರಕಾಶಕರು ಮತ್ತು ವ್ಯವಸ್ಥಾಪಕರಾಗಿದ್ದವರು ಬೆಳುವಾಯಿ ಶೇಖರ ಅವರೇ.
ಮೂಡಬಿದ್ರಿ ಸಮೀಪದ ಬೆಳುವಾಯಿ ಬಳಿಯ ಮಾಲಾಡಿ ಬಳಿ ಪತ್ರಿಕೆಯ ಕೆಲಸ ಕಾರ್ಯಗಳು ನಡೆಯುತ್ತಿತ್ತು. ಬಿ. ಸಿ. ರೋಡ್ ತಾಲೂಕು ಕಚೇರಿ ಎದುರುಗಡೆಯಿದ್ದ ವಂಶ ಪ್ರಿಂಟರ್ಸ್ ನಲ್ಲಿ ಪುಟ ವಿನ್ಯಾಸ ಮತ್ತು ಮುದ್ರಣ ಕಾರ್ಯ ನಡೆಯುತ್ತಿತ್ತು. ಪತ್ರಿಕೆ ನಾಲ್ಕು ಪುಟಗಳನ್ನು ಹೊಂದಿತ್ತು.
ಅಕ್ಷರ ಕ್ರಾಂತಿಯೊಂದಿಗೆ... ಎಂಬ ಘೋಷಣೆಯೊಂದಿಗೆ ಪ್ರಕಟವಾಗುತ್ತಿದ್ದ "ಹುಭಾಶಿಕ"ದಲ್ಲಿ ಸಂಪಾದಕೀಯ, ಬೆಳುವಾಯಿಯ ಬಿ. ಎಸ್. ಹೃದಯ, ಪಾಂಗಾಳ ಬಾಬು ಕೊರಗ, ಭವಾನಿಶಂಕರ್, ಪಳ್ಳಿ ಗೋಕುಲದಾಸ್, ರಮೇಶ್ ಮಂಚಕಲ್, ಗುಂಡಾವು ರಮೇಶ್, ದಿನಕರ ಕೆಂಜೂರು, ಗೌತಮ್ ಕಾರ್ಕಳ, ಎಸ್ ಎಂ ಬಿ, ಮೊಲಕಾಲ್ಮೂರು ಶ್ರೀನಿವಾಸಮೂರ್ತಿ ಸಹಿತ ಅನೇಕ ಬರಹಗಾರರ ಲೇಖನ, ಕವನ, ವರದಿ ಸಹಿತ ವೈವಿಧ್ಯಮಯ ಬರಹಗಳು, ಕೊರಗ ಸಮುದಾಯದ ಕಷ್ಟ ಕಾರ್ಪಣ್ಯಗಳ ಕುರಿತ ವಿವಿಧ ರೋತಿಯ ಬರಹಗಳು ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ