ಕನ್ನಡ ಪತ್ರಿಕಾ ಲೋಕ (ಭಾಗ ೧೯೯) - ಹೋರಾಟದ ಅಮೃತ

ಕೆ.ಶಂಕರಭಟ್ ಸಂಪಾದಕತ್ವದಲ್ಲಿ ‘ಹೋರಾಟದ ಅಮೃತ’
೮೦ರ ದಶಕದಲ್ಲಿ ದೃಶ್ಯ ಮಾಧ್ಯಮಗಳ ಭರಾಟೆ ಇಲ್ಲದ ಸಮಯದಲ್ಲಿ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ ಪತ್ರಿಕೆ ‘ಕನ್ನಡ ಅಮೃತ’. ತನ್ನ ನೇರ, ನಿಷ್ಟುರ, ಪ್ರಾಮಾಣಿಕ ಲೇಖನಗಳಿಗೆ ಹೆಸರುವಾಸಿಯಾಗಿದ್ದ ಪತ್ರಿಕೆಯ ಕಚೇರಿಯನ್ನು ಪತ್ರಿಕೆಯಲ್ಲಿ ಪ್ರಕಟವಾದ ಒಂದು ವರದಿಯನ್ನು ವಿರೋಧಿಸಿ ದುಷ್ಕರ್ಮಿಗಳು ಧ್ವಂಸ ಮಾಡಿದ್ದರು. ನಂತರ ಕಾರಣಾಂತರಗಳಿಂದ ಪತ್ರಿಕೆಯನ್ನು ಸ್ಥಗಿತಗೊಳಿಸಿದ್ದರು ಶಂಕರಭಟ್ಟರು. ಅಮೃತ ಪತ್ರಿಕೆಯ ಕಾರಣದಿಂದ ಈಗಲೂ ಹಳೆಯ ಮಂದಿ ಶಂಕರ ಭಟ್ಟರನ್ನು ‘ಅಮೃತ’ ಭಟ್ಟರು ಎಂದು ಕರೆಯುವುದುಂಟು.
ನಂತರದ ದಿನಗಳಲ್ಲಿ ಶಂಕರಭಟ್ಟರು ‘ವ್ಯವಸ್ಥೆಯ ಪ್ರತಿಬಿಂಬ’ ಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿದರೂ ಅವರಿಗೆ ‘ಅಮೃತ’ ಎನ್ನುವ ಹೆಸರಿನೆಡೆಗೆ ತುಡಿತವಿತ್ತು. ಇದೇ ಈಗ ‘ಹೋರಾಟದ ಅಮೃತ’ ಎನ್ನುವ ಶೀರ್ಷಿಕೆಯೊಂದಿಗೆ ಪತ್ರಿಕಾರಂಗಕ್ಕೆ ಕಾಲಿಟ್ಟಿದೆ.
‘ಹೋರಾಟದ ಅಮೃತ’ ವಾರ ಪತ್ರಿಕೆಯು ೨೦೨೩, ನವೆಂಬರ್ ೨ರಂದು ಬೆಂಗಳೂರಿನ ಸೆಂಚುರಿ ಕ್ಲಬ್ ನಲ್ಲಿ ಗಣ್ಯ ಅತಿಥಿಗಳ ಅಮೃತ ಹಸ್ತದಿಂದ ಬಿಡುಗಡೆಯಾಗಿ ಈಗಲೂ ಮುದ್ರಿತವಾಗಿ ಹೊರಬರುತ್ತಿದೆ. ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಆಗಿದ್ದು ೧೬ ಪುಟಗಳನ್ನು ಹೊಂದಿದೆ. ಎಲ್ಲಾ ಪುಟಗಳು ಕಪ್ಪು ಬಿಳುಪು. ನಮ್ಮ ಸಂಗ್ರಹದಲ್ಲಿರುವ ಸಂಚಿಕೆಯಲ್ಲಿ (ನವೆಂಬರ್ ೧೦, ೨೦೨೩) ಕಾರ್ಕಳದಲ್ಲಿ ಎಲ್ಲಿ ಕಂಡರೂ ಗಣಿ ಮಾಫಿಯಾ, ಸದಾನಂದರ ಆನಂದವೇ ಮಾಯ!, ಬೆಳಗಾವಿ ಕದನದಲ್ಲಿ ಸರ್ಕಾರದ ಬುಡಕ್ಕೆ ಬೀಳುತ್ತಾ ಕೊಡಲಿ ಪೆಟ್ಟು !, ಸೋಷಿಯಲ್ ನಲ್ಲಿ ಬೆತ್ತಲಾದ ಡೀಪ್ ಫೇಕ್’ ಮೊದಲಾದ ಮುಖಪುಟ ಬರಹಗಳಿವೆ. ದೀಪಾವಳಿ ಬಗ್ಗೆ ವಿಶೇಷ ಲೇಖನ ಹಾಗೂ ಜಾಹೀರಾತುಗಳಿವೆ.
ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ. ೧೦.೦೦. ಚಂದಾ ವಿವರಗಳು ಲಭ್ಯವಿಲ್ಲ. ಹೋರಾಟದ ಅಮೃತ ಪತ್ರಿಕೆಯ ಸಂಪಾದಕ, ಮುದ್ರಕ, ಪ್ರಕಾಶಕರು ಎಲ್ಲವೂ ಶಂಕರಭಟ್ಟರೇ ಆಗಿದ್ದಾರೆ. ಪತ್ರಿಕೆಯ ಕಚೇರಿ ಮಂಗಳೂರಿನ ಪದವು ಎಂಬಲ್ಲಿದ್ದು, ಕಾರ್ಪೋರೇಟ್ ಕಚೇರಿಯು ಬೆಂಗಳೂರಿನ ಶೇಷಾದ್ರಿಪುರಂ ನಲ್ಲಿದೆ.