ಕನ್ನಡ ಪತ್ರಿಕಾ ಲೋಕ (ಭಾಗ ೨೦೦) - ಹೊಸ ಕನ್ನಡ

ಕನ್ನಡ ಪತ್ರಿಕಾ ಲೋಕ (ಭಾಗ ೨೦೦) - ಹೊಸ ಕನ್ನಡ

ಪ್ರವೀಣ್ ಕುಮಾರ್ ಕೆ ಸಂಪಾದಕತ್ವದ ‘ಹೊಸ ಕನ್ನಡ’ ವಾರ ಪತ್ರಿಕೆ

ಕನ್ನಡ ಪತ್ರಿಕಾ ಲೋಕಕ್ಕೆ ಹೊಸದಾಗಿ ಸೇರ್ಪಡೆಯಾದ ಪತ್ರಿಕೆ ‘ಹೊಸ ಕನ್ನಡ’. ಜನವರಿ ೫, ೨೦೨೫ರಂದು ಪತ್ರಿಕೆಯ ಮೊದಲ ಸಂಚಿಕೆ ಮಾರುಕಟ್ಟೆಗೆ ಬಿಡುಗಡೆಯಾಯಿತು. ಪ್ರತೀ ವಾರ ವಸ್ತುನಿಷ್ಟ ವರದಿ, ವಿಭಿನ್ನ ನಿರೂಪಣೆಯೊಂದಿಗೆ ಪ್ರಕಟವಾಗುವ ವಾಗ್ದಾನವನ್ನು ಸಂಪಾದಕರು ನೀಡಿದ್ದಾರೆ. ವಾರ್ತಾ ಪತ್ರಿಕೆಯ ಆಕಾರದ ೧೨ ಪುಟಗಳು, ೬ ವರ್ಣ ಹಾಗೂ ೬ ಕಪ್ಪು ಬಿಳುಪು ಮುದ್ರಣ.  

ಮೊದಲ ಸಂಚಿಕೆಯಲ್ಲಿ ಹಲವಾರು ಮಾಹಿತಿಪೂರ್ಣ ಬರಹಗಳಿವೆ. ಅವುಗಳಲ್ಲಿ ‘ಇದು ಅಂಕದ ಕೋಳಿಗಳ ರೋಚಕ ಜಗತ್ತು !, ೬ ಬಾರಿ ಕ್ಯಾನ್ಸರ್ ಗೆದ್ದ ಸಾಹಸಿ, ಸ್ವಾವಲಂಬನೆಯತ್ತ ಮಕ್ಕಳ ಧೃಢ ಚಿತ್ತ, ಅಂಬುತೀರ್ಥರ ೭೦% ಉತ್ಪತ್ತಿ ನಷ್ಟದಲ್ಲಿ ಅಡಿಕೆ ಬೆಳೆ ಕಾರಣ ಕೂಡಾ ಸಿಕ್ಕಿದೆ…!, ಯಾವ ಪ್ರಾಣಿಯ ಹಾಲು ಕಪ್ಪು ಬಣ್ಣದ್ದಾಗಿರುತ್ತದೆ?, ಮಹಾಭಾರತದ ಈ ಪ್ರಸಂಗದಲ್ಲಿ ಗಾಂಧಾರಿ ಮತ್ತು ದುರ್ಯೋಧನನ ಕಥೆ, ವಿಶ್ವದ ಪ್ರಥಮ ಕೃತಕ ಹೃದಯ ಜೋಡಣೆ ನೆನಪು ಮೊದಲಾದ ಲೇಖನಗಳಿವೆ. ವಾರದ ವಿಶೇಷದಲ್ಲಿ ಸುಳ್ಯದ ಬ್ರಹ್ಮ ರಥದ ಕಥೆಯಿದೆ. ಸಿನೆಮಾ ಮತ್ತು ಕ್ರೀಡಾ ಸುದ್ದಿಗಳಿಗೂ ಸಾಕಷ್ಟು ಜಾಗ ಮೀಸಲಾಗಿಡಲಾಗಿದೆ.

ಚಿತ್ರಕಲಾ ಎ ಆರ್ ಅವರು ಪತ್ರಿಕೆಯ ಪ್ರಕಾಶಕ ಹಾಗೂ ಮುದ್ರಕರಾಗಿಯೂ, ಸುದರ್ಶನ್ ಬಿ. ಪ್ರವೀಣ್ ಮಾಲಕರಾಗಿಯೂ, ಪ್ರವೀಣ್ ಕುಮಾರ್ ಕೆ ಇವರು ಸಂಪಾದಕರಾಗಿಯೂ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಪತ್ರಿಕೆಯು ಎಜೆ ಇಕೋ ಪ್ರಾಡಕ್ಸ್, ಧಾರವಾಡ ಇಲ್ಲಿ ಮುದ್ರಿತವಾಗುತ್ತಿದ್ದು, ಬೆಳ್ತಂಗಡಿಯಲ್ಲಿ ಕಚೇರಿಯನ್ನು ಹೊಂದಿದೆ. ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಬಿಡಿ ಪ್ರತಿಯ ಬೆಲೆಯನ್ನು ನಮೂದಿಸದಿದ್ದರೂ ರೂ.೭.೦೦ ಎಂದು ಹೇಳಲಾಗಿದೆ. ಚಂದಾ ವಿವರಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪತ್ರಿಕೆಯಲ್ಲಿ ಜಾಹೀರಾತುಗಳಿಗೆ ಜಾಗ ಇದೆ.