ಕನ್ನಡ ಪತ್ರಿಕಾ ಲೋಕ (ಭಾಗ ೨೦೧) - ವಿಕ ಮನಿ

ಕನ್ನಡ ಪತ್ರಿಕಾ ಲೋಕ (ಭಾಗ ೨೦೧) - ವಿಕ ಮನಿ

ವಿಜಯ ಕರ್ನಾಟಕದ ಸೋದರ ಪತ್ರಿಕೆ ‘ವಿಕ ಮನಿ’

ಹಣಕಾಸಿನ ವ್ಯವಹಾರ, ಶೇರ್ ಮಾರ್ಕೆಟ್ ಏರಿಳಿತ, ಮ್ಯೂಚುವಲ್ ಫಂಡ್ ಹೂಡಿಕೆಯ ಬಗ್ಗೆ, ಬಜೆಟ್ ವಿಶ್ಲೇಷಣೆ ಮೊದಲಾದ ಮಾಹಿತಿಗಳು ಆಂಗ್ಲ ಭಾಷೆಯಲ್ಲಿಯೇ ಹೆಚ್ಚಾಗಿ ಸಿಗುವುದರಿಂದ ಕೇವಲ ಕನ್ನಡ ಬಲ್ಲ ಓದುಗರು ಆ ಮಾಹಿತಿಗಳಿಂದ ವಂಚಿತರಾಗಿದ್ದರು. ಇದನ್ನು ಗಮನಿಸಿದ ವಿಜಯ ಕರ್ನಾಟಕದ ಸೋದರ ಪತ್ರಿಕೆಯಾದ ‘ದಿ ಇಕೊನಾಮಿಕ್ ಟೈಮ್ಸ್’ ಕನ್ನಡ ಭಾಷೆಯಲ್ಲಿ ‘ವಿಕ ಮನಿ’ ಎನ್ನುವ ವಾರ ಪತ್ರಿಕೆಯನ್ನು ೨೦೨೪ರ ಎಪ್ರಿಲ್ ತಿಂಗಳಿನಿಂದ ಹೊರ ತರುತ್ತಿದೆ. 

ವಾರ್ತಾ ಪತ್ರಿಕೆಯ ಆಕಾರದ ೧೨ ಪುಟಗಳು ಮತ್ತು ಎಲ್ಲವೂ ವರ್ಣರಂಜಿತ. ಕೆಲವು ಬಾರಿ ವಿಶೇಷ ಸುದ್ದಿಗಳು ಇದ್ದರೆ ಪುಟಗಳ ಸಂಖ್ಯೆ ಏರುವುದೂ ಇದೆ. ಶೇರು ಮಾರ್ಕೆಟ್ ಹೂಡಿಕೆ ವಿಶ್ಲೇಷಕರಾದ ಡಾ. ಬಾಲಾಜಿ ರಾವ್ ಡಿ.ಜೆ., ಸಿಎ ರುದ್ರಮೂರ್ತಿ, ಅನಂತ ಎಲ್, ಸುರೇಶ ಬಾಲಚಂದ್ರನ್, ಶರತ್ ಎಂ ಎಸ್, ರೋಹಿತ್ ಭಟ್ ಮೊದಲಾದವರು ತಮ್ಮ ತಮ್ಮ ಅನಿಸಿಕೆ, ನಿಲುವುಗಳನ್ನು ಬರೆಯುತ್ತಿದ್ದಾರೆ. ‘ಹಣ ಸಂಪಾದನೆ ಮಾಡುವುದು ಹೇಗೆ?’ ಎಂದು ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಬರೆಯುತ್ತಾರೆ. ರಂಗಸ್ವಾಮಿ ಮೂಕನಹಳ್ಳಿ, ಹಾಗೂ ವಾಸ್ತು ತಜ್ಞ ದೈವಜ್ಞ ಕೆ ಎನ್ ಸೋಮಯಾಜಿ ಅವರ ಬರಹಗಳೂ ಆಗಾಗ ಕಾಣಸಿಗುತ್ತವೆ.

ಮೆಟ್ರೋಪಾಲಿಟನ್ ಮೀಡಿಯಾ ಕಂಪೆನಿ ಲಿಮಿಟೆಡ್ ಪರವಾಗಿ ಆರ್ ಜೆ ಪ್ರಕಾಶನ್ ಅವರು ಪತ್ರಿಕೆಯನ್ನು ಮುದ್ರಿಸಿ ಪ್ರಕಾಶಿಸಿರುತ್ತಾರೆ. ಸುದರ್ಶನ್ ಚನ್ನಗಿಹಳ್ಳಿ ಇವರು ಪತ್ರಿಕೆಯ ಸಂಪಾದಕರಾಗಿದ್ದಾರೆ. ಪತ್ರಿಕೆಯು ಬೆಂಗಳೂರಿನಲ್ಲಿ ಮುದ್ರಣಾಲಯವನ್ನು ಹೊಂದಿದೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ ೫.೦೦. ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯಲ್ಲಿ ಜಾಹೀರಾತುಗಳಿಗೆ ಸ್ಥಾನವಿದೆ. 

(ಸಂಗ್ರಹ ಪತ್ರಿಕೆ: ಮೇ ೧೨-೧೮, ೨೦೨೪, ಸಂಪುಟ ೧, ಸಂಚಿಕೆ ೩)