ಕನ್ನಡ ಪತ್ರಿಕಾ ಲೋಕ (ಭಾಗ ೨೦೯) - ಸಂಪ್ರಭಾ

ಸುಮುಖಾನಂದ ಜಲವಳ್ಳಿ ಅವರ "ಸಂಪ್ರಭಾ"
ಖ್ಯಾತ ಕವಿ, ಲೇಖಕ, ವಿಮರ್ಶಕ, ಅಧ್ಯಾಪಕ ಸುಮುಖಾನಂದ ಜಲವಳ್ಳಿ ಅವರು ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡುಬರುತ್ತಿರುವ ವೈಚಾರಿಕ ಮತ್ತು ವೈವಿಧ್ಯಮಯ ಸದಭಿರುಚಿಯ ಮಾಸಪತ್ರಿಕೆಯಾಗಿದೆ "ಸಂಪ್ರಭಾ".
ಮೂವತ್ತು ವರ್ಷಗಳ ಹಿಂದೆ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕು ಕಿನ್ನಿಗೋಳಿಯ ಶಾಲೆಯಲ್ಲಿ ಅಧ್ಯಾಪಕರಾಗಿದ್ದಾಗ ಈ ಪತ್ರಿಕೆಯನ್ನು ಜಲವಳ್ಳಿಯವರು ಆರಂಭಿಸಿದ್ದರು. ಪ್ರಸ್ತುತ ಇವರು ನಿವೃತ್ತರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಅರೆಯಂಗಡಿಯ ಹುಡಗೋಡುಮಕ್ಕಿಯಲ್ಲಿ ವಾಸ್ತವ್ಯವಿದ್ದು, ಇಲ್ಲಿಂದಲೇ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ.
'ಬೆಳಕು ಎಲ್ಲಿಂದಲೇ ಬರಲಿ; ಕಿಟಕಿ ಬಾಗಿಲು ತೆರೆದಿರಲಿ' ಮತ್ತು " ಜಾತಿ ಮತ ತೊಲಗಲಿ; ಮಾನವತೆ ಅರಳಲಿ' ಎಂಬ ಅರ್ಥಪೂರ್ಣ ಘೋಷಣೆಗಳೊಂದಿಗೆ ಬರುತ್ತಿರುವ "ಸಂಪ್ರಭಾ" ದ ವಾರ್ಷಿಕ ಚಂದಾ ಮೊತ್ತ 230 ರೂಪಾಯಿಗಳು.
ಸಂಪ್ರಭಾದ ಸಂಪಾದಕರು ಸುಮುಖಾನಂದ ಜಲವಳ್ಳಿಯವರಾದರೆ, ನಿರ್ವಾಹಕ ಪ್ರಕಾಶಕಿ ಶ್ರೀಮತಿ ಲಲಿತಾ ನಾಯಕ್ ಆಗಿದ್ದಾರೆ. ರಾಮ ವೆಂಕಟ ನಾಯಕ ಅವರು ಮಾಲಿಕರು, ಪ್ರಕಾಶಕರು ಮತ್ತು ಮುದ್ರಕರು. ಇಪ್ಪತ್ತು ಪುಟಗಳ ಪತ್ರಿಕೆಯಲ್ಲಿ ಜಲವಳ್ಳಿಯವರ ಸಂಪಾದಕೀಯ ಮತ್ತು ಇತರ ಬರೆಹಗಳು, ಅನೇಕ ಖ್ಯಾತನಾಮರ ಕಥೆ, ಕವನ, ಚುಟುಕು, ಹಾಸ್ಯ ಬರೆಹ, ವಿಮರ್ಶೆ, ವಿಶ್ಲೇಷಣೆ, ಅವಲೋಕನ, ವಿಜ್ಞಾನ ಸಹಿತ ವೈವಿಧ್ಯಮಯ ವೈಚಾರಿಕ ಬರೆಹಗಳು ಪ್ರಕಟಗೊಳ್ಳುತ್ತವೆ.
~ ಶ್ರೀರಾಮ ದಿವಾಣ