ಕನ್ನಡ ಪತ್ರಿಕಾ ಲೋಕ (ಭಾಗ ೨೧೨) - ಬಳಕೆದಾರರ ಶಿಕ್ಷಣ

ಬಳಕೆದಾರರ ಶಿಕ್ಷಣ ಹಾಗೂ ರಕ್ಷಣೆಗೆ ಮುಡಿಪಾಗಿದ್ದ "ಬಳಕೆದಾರರ ಶಿಕ್ಷಣ"
ಬಳಕೆದಾರರ ಶಿಕ್ಷಣ ಹಾಗೂ ರಕ್ಷಣೆಗೆ ಮುಡಿಪಾಗಿದ್ದು, ಸುಮಾರು ಮೂವತ್ತಕ್ಕೂ ಅಧಿಕ ವರ್ಷಗಳ ಕಾಲ ಪ್ರಕಟವಾಗುತ್ತಿದ್ದ ಪಾಕ್ಷಿಕ ಪತ್ರಿಕೆಯಾಗಿತ್ತು "ಬಳಕೆದಾರರ ಶಿಕ್ಷಣ". ಪ್ರಕಟವಾಗುತ್ತಿದ್ದ ಅವಧಿಯಲ್ಲಿ ಕನಿಷ್ಟ ಮೂರು ಬಾರಿ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರು ಬದಲಾಗಿದ್ದಾರೆ. ಮುದ್ರಣದ ಸ್ಥಳವೂ ಬದಲಾಗಿದೆ.
"ಬಳಕೆದಾರರ ಶಿಕ್ಷಣ" ಪಾಕ್ಷಿಕ ಪತ್ರಿಕೆ ಆರಂಭಗೊಂಡದ್ದು 1987ರ ಅವಧಿಯಲ್ಲಿ. ನಾಲ್ಕು ಪುಟಗಳಲ್ಲಿ ಬರುತ್ತಿದ್ದ ಪತ್ರಿಕೆಯ ವಾರ್ಷಿಕ ಚಂದಾ ಮೊತ್ತ ಮೂವತ್ತು ರೂಪಾಯಿಗಳಾಗಿತ್ತು. ಐದು ವರ್ಷಗಳಿಗೆ 140 ರೂಪಾಯಿಯಂತೆಯೂ, ಪ್ರಾಯೋಜಕತ್ವ ಮೊತ್ತವೆಂದು ಒಂದು ಸಾವಿರ ರೂಪಾಯಿಗಳನ್ನೂ ಸಂಗ್ರಹಿಸಲಾಗುತ್ತಿತ್ತು.
2002ರ ಅವಧಿಯಲ್ಲಿ ಮೂಡುಬಿದ್ರಿಯ ರಾಜೇಂದ್ರ ಪೈ ಸಂಪಾದಕರಾಗಿದ್ದರು. ಕಾರ್ಕಳದ ಕನ್ಶ್ಯೂಮರ್ ರೈಟ್ ಪ್ರೊಟಕ್ಷನ್ ಫಾರಮ್ ನ ಗಣಪತಿ ಕಾಮತ್ ಪ್ರಕಾಶಕರಾಗಿದ್ದರು. ಮೂಡುಬಿದ್ರಿಯ ದೀಕ್ಷಾ ಗ್ರಾಫಿಕ್ಸ್ ನಲ್ಲಿ ಮುದ್ರಣವಾಗುತ್ತಿತ್ತು. 2007ರ ಅವಧಿಯಲ್ಲಿ ಎಚ್. ಸುಂದರ ರಾವ್ ಜೋಡುಮಾರ್ಗ ಸಂಪಾದಕರಾಗಿದ್ದರು. ಬಸ್ರೂರು ಬಳಕೆದಾರರ ವೇದಿಕೆಯು ಪ್ರಕಾಶನ ಸಂಸ್ಥೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಬಿ. ಸಿ. ರೋಡ್ ನ ನೇಸರ ಮುದ್ರಣದಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು. ವಿವಿಧ ಗ್ರಾಹಕ ನ್ಯಾಯಾಲಯಗಳ ಆದೇಶಗಳು, ಗ್ರಾಹಕರ ಪತ್ರಗಳು, ಅಧಿಕಾರಿಗಳ ಪ್ರತಿಕ್ರಿಯೆಗಳು, ಲೇಖನಗಳು "ಬಳಕೆದಾರರ ಶಿಕ್ಷಣ" ಪಾಕ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ