ಕನ್ನಡ ಪತ್ರಿಕಾ ಲೋಕ (ಭಾಗ ೨೧೫) - ವಿಪ್ರ ವಾಣಿ

ಕನ್ನಡ ಪತ್ರಿಕಾ ಲೋಕ (ಭಾಗ ೨೧೫) - ವಿಪ್ರ ವಾಣಿ

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ "ವಿಪ್ರ ವಾಣಿ"

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ (ರಿ) ಕಳೆದ 28 ವರ್ಷಗಳಿಂದ ನಿರಂತರವಾಗಿ ಪ್ರಕಟಿಸಿಕೊಂಡು ಬರುತ್ತಿರುವ ತ್ರೈಮಾಸಿಕ ಪತ್ರಿಕೆಯಾಗಿದೆ "ವಿಪ್ರ ವಾಣಿ". 1994ರಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಸ್ಥಾಪನೆಗೊಂಡಿತ್ತು. ಸ್ಥಾಪನೆಯಾದ ಎರಡೇ ವರ್ಷಗಳಲ್ಲಿ ಪರಿಷತ್ ಪತ್ರಿಕೆಯನ್ನು ಆರಂಭಿಸಿತ್ತು. 1996ರಲ್ಲಿ ಪತ್ರಿಕೆ ಆರಂಭಿಸಿದಾಗ "ವಿಪ್ರವಾಣಿ" ಒಂದು ಪುಟದ ಪತ್ರಿಕೆಯಾಗಿತ್ತು. ಈಗ 32 ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಬಹುವರ್ಣಗಳ ಮುಖಪುಟದೊಂದಿಗೆ ಬರುತ್ತಿದೆ.

ಶ್ರೀರಾಮ ಕಾರಂತ (1996), ಬಳ್ಕೂರು ಭಾಸ್ಕರ ಉಡುಪ (1997, 2000 - 2017), ಎಂ. ರಾಮಕೃಷ್ಣ ಹೆಬ್ಬಾರ್ (1998, 1999), ಎನ್. ವಿಶ್ವನಾಥ ಕರಬ (2017 - 2018), ಪೂರ್ಣಿಮಾ ಎನ್. ಭಟ್ಟ ಕಮಲಶಿಲೆ (2018 - 2019) ಹಾಗೂ ಪ್ರೊ. ಶಂಕರ ರಾವ್ ಕಾಳಾವರ (2020ರಿಂದ) ಪ್ರಧಾನ ಸಂಪಾದಕರು. ಈ ಅವಧಿಗಳಲ್ಲಿ ಉಪ್ಪುಂದ ಚಂದ್ರಶೇಖರ ಹೊಳ್ಳ, ಡಾ. ಎಚ್. ವಿ. ನರಸಿಂಹಮೂರ್ತಿ, ಬಳ್ಕೂರು ಭಾಸ್ಕರ ಉಡುಪ, ಪ್ರೊ. ಶಂಕರ ರಾವ್ ಕಾಳಾವರ, ಡಾ. ಕನರಾಡಿ ವಾದಿರಾಜ ಭಟ್, ವೆಂಕಟೇಶ ಹೆಬ್ಬಾರ್ ಕೋಣಿ, ಕೆ. ನಿತ್ಯಾನಂದ ವೈದ್ಯ, ಕೆ. ರವೀಂದ್ರ ಐತಾಳ್ ಕೋಟೇಶ್ವರ, ಹೆಚ್. ರಾಜಾರಾಮ ಭಟ್, ಶಂಕರ ನಾರಾಯಣ ಶಾಸ್ತ್ರೀ, ಎ. ವೈಕುಂಠ ಹೆಬ್ಬಾರ್, ಬಿ. ಸೂರ್ಯನಾರಾಯಣ ಹೆಬ್ಬಾರ್, ಯು. ಲಕ್ಷ್ಮೀನಾರಾಯಣ ವೈದ್ಯ, ಲಕ್ಷ್ಮಿ ನಾರಾಯಣ ಭಟ್ ಕೋಟೇಶ್ವರ, ಕೆ. ಶ್ರೀನಿವಾಸ ಹೆಬ್ಬಾರ್, ಸುಬ್ರಹ್ಮಣ್ಯ ಐತಾಳ್ ವಕ್ವಾಡಿ, ಬಿ. ಲಕ್ಷ್ಮೀನಾರಾಯಣ ಉಪಾಧ್ಯಾಯ, ಗಣೇಶ್ ರಾವ್ ಕುಂಭಾಸಿ, ಕೆ. ಜಗದೀಶ ರಾವ್ ಕೋಟೇಶ್ವರ, ಅಶೋಕ್ ಕುಮಾರ, ನಾಗೇಶ್ ನಾವಡ, ಟಿ. ಕೆ. ಎಂ. ಭಟ್, ರಾಘವೇಂದ್ರ ಅಡಿಗ ಕಲ್ಕಟ್ಟೆ,  ವೈ. ಎನ್. ವೆಂಕಟೇಶಮೂರ್ತಿ ಭಟ್, ರಮೇಶ ವೈದ್ಯ, ಶ್ರೀಮತಿ ಶೋಭಾ ಅರಸ್, ಬಿ. ಅನಂತ ಪದ್ಮನಾಭ ಬಾಯರಿ, ಹಳ್ಳಿ ಶ್ರೀನಿವಾಸ ಭಟ್ಟ ಕೋಟೇಶ್ವರ, ಅಶೋಕ ಕುಮಾರ ಹೊಳ್ಳ ವಿ. ಹಾಗೂ ಎಚ್. ಶುಭಚಂದ್ರ ಹತ್ವಾರ್ ಇವರುಗಳು ಸಂಪಾದಕ ಮಂಡಳಿ ಸದಸ್ಯರಾಗಿದ್ದರು.

ಕಳೆದ 28 ವರ್ಷಗಳ ಅವಧಿಯಲ್ಲಿ ಒಟ್ಟು ಆರು ಸಂಚಿಕೆಗಳನ್ನು ಹೆಚ್ಚಿನ ಪುಟಗಳೊಂದಿಗೆ ವಿಶೇಷ ಸಂಚಿಕೆಗಳನ್ನಾಗಿ ರೂಪಿಸಿ ಪ್ರಕಟಿಸಲಾಗಿದೆ. "ವಿಪ್ರವಾಣಿ" ಯಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ, ವಿವಿಧ ವಲಯ ಸಮಿತಿಗಳ ಕಾರ್ಯಕ್ರಮಗಳ ವರದಿಗಳು,  ಸಾಧಕರ ಪರಿಚಯ ಇತ್ಯಾದಿಗಳಲ್ಲದೆ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಇತ್ಯಾದಿ ವೈವಿಧ್ಯಮಯ ಲೇಖನಗಳು ಪ್ರಕಟಗೊಳ್ಳುತ್ತಾ ಮೌಲಿಕವಾಗಿ, ಸಂಗ್ರಹಯೋಗ್ಯ ಸಂಚಿಕೆಗಳಾಗಿ ಪ್ರಕಟಗೊಳ್ಳುತ್ತಿವೆ.

ಕಳೆದ ಐದು ವರ್ಷಗಳಿಂದ ಪ್ರಧಾನ ಸಂಪಾದಕರಾಗಿರುವ ಪ್ರೊ. ಶಂಕರ ರಾವ್ ಕಾಳಾವರ ಅವರು ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನ ವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥ (ಎಚ್ ಒ ಡಿ)ರಾಗಿದ್ದಾರೆ. ಕವಿಯೂ ಆಗಿರುವ ಇವರ "ಕೆಸರಜ್ಜನ ತ್ರಿಪದಿಗಳು" ಮತ್ತು "ಹೂಬನ" ಎಂಬ ಎರಡು ಸಂಕಲನಗಳು ಪ್ರಕಟಗೊಂಡಿವೆ. 

~ ಶ್ರೀರಾಮ ದಿವಾಣ