ಕನ್ನಡ ಪತ್ರಿಕಾ ಲೋಕ (ಭಾಗ ೨೧೬) - ಪ್ರವಾಸಿ ಪ್ರಪಂಚ

ವಿಶ್ವೇಶ್ವರ ಭಟ್ ಅವರ "ಪ್ರವಾಸಿ ಪ್ರಪಂಚ"
ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್ ಅವರು ಕಳೆದ ತಿಂಗಳಷ್ಟೇ ಆರಂಭಿಸಿದ ಹೊಸ ವಾರಪತ್ರಿಕೆಯಾಗಿದೆ "ಪ್ರವಾಸಿ ಪ್ರಪಂಚ". ೨೦೨೫, ಜೂನ್ ಏಳರ ಸಂಚಿಕೆಯೇ ಪ್ರವಾಸಿ ಪ್ರಪಂಚದ ಮೊದಲ ಸಂಚಿಕೆ. ಮೊದಲ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಡುಗಡೆಗೊಳಿಸಿದರು.
ಮೊದಲ ಸಂಚಿಕೆಯಲ್ಲಿ ತಮ್ಮ ನೂತನ ಪತ್ರಿಕೆಯ ಬಗ್ಗೆ "ಪ್ರವಾಸಿ ಪ್ರಪಂಚ"ದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಹೀಗೆ ಬರೆದಿದ್ದಾರೆ.: " ಕನ್ನಡದಲ್ಲಿ ಪ್ರವಾಸಕ್ಕೆ ಸಂಬಂಧಿಸಿದ 'ಸಂಚಾರಿ' ಎಂಬ ಮಾಸಿಕ ಕೆಲಕಾಲ ಪ್ರಕಟವಾಗಿತ್ತಂತೆ. ಆದರೆ ಬ್ರಾಡ್ ಶೀಟ್ ಮಾದರಿಯ ನಮ್ಮ ಪತ್ರಿಕೆ ಕನ್ನಡದಲ್ಲೊಂದೇ ಅಲ್ಲ, ಭಾರತೀಯ ಪತ್ರಿಕೋದ್ಯಮದಲ್ಲಿಯೇ ಏಕೈಕ, ವಿನೂತನ ಹಾಗೂ ಮೊದಲ ಪ್ರಯೋಗ. ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಇದೊಂದು ಹೊಸ ಪ್ರಯತ್ನ ಮತ್ತು ಹೊಸ ಸಾಹಸ. ಪ್ರತಿ ವಾರ ಸರ್ವ ವರ್ಣಮಯ ಇಪ್ಪತ್ತು - ಇಪ್ಪತ್ನಾಲ್ಕು ಪುಟಗಳು, ಬ್ರಾಡ್ ಶೀಟ್ ಆಕಾರ, ಓದಲು ಸುಲಭವೆನಿಸುವ ಮುದ್ದಾದ ಅಕ್ಷರ ಜೋಡಣೆ, ಸೊಗಸಾದ ವಿನ್ಯಾಸ, ವಿಶಾಲ ಫೋಟೋಗಳೊಂದಿಗಿನ ಸಮೃದ್ಧ ಹೂರಣ... ಹಸಿದವನ ಮುಂದೆ ಕೊಟ್ಟೆ ಕಡುಬು ಇಟ್ಟಂತೆ !".
ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಮೊದಲಾದವರು ಪತ್ರಿಕೆಗೆ ಶುಭಹಾರೈಸಿ ಬರೆದ ಲೇಖನಗಳ ಸಹಿತ ಹತ್ತು ಹಲವು ವೈವಿಧ್ಯಮಯ ಪ್ರವಾಸೀ ಬರಹ, ಮಾಹಿತಿ, ಸಂದರ್ಶನ ಇತ್ಯಾದಿಗಳೊಂದಿಗೆ ಆಕರ್ಷಕವಾಗಿ ಮೊದಲ ಸಂಚಿಕೆ ಮೂಡಿಬಂದಿದೆ. ಬೆಂಗಳೂರು ರಾಜರಾಜೇಶ್ವರಿ ನಗರದ ಬಿಇಎಂಎಲ್ ಲೇಔಟ್ ನಲ್ಲಿ ಕಚೇರಿ ಹೊಂದಿರುವ ಸುವಿಶ್ವ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಮೂಲಕ ಪ್ರಕಟವಾಗುತ್ತಿರುವ "ಪ್ರವಾಸಿ ಪ್ರಪಂಚ" ದ ಬಿಡಿ ಸಂಚಿಕೆಯ ಬೆಲೆ ₹ ೧೫/- ರೂಪಾಯಿಗಳು. ಭಟ್ರಹಳ್ಳಿಯ ಎಂ ಎನ್ ಎಸ್ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ. ದ್ವಿತೀಯ ಸಂಚಿಕೆಯಿಂದ ಮುಖಬೆಲೆ ರೂ. ೨೦.೦೦ ಆಗಿದೆ.
ನವೀನ್ ಸಾಗರ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ. ಚಿದಾನಂದ ಕಡಲಾಸ್ಕರ ಕಾರ್ಯನಿರ್ವಹಣಾಧಿಕಾರಿ ಮತ್ತು ಪ್ರಕಾಶಕರಾಗಿದ್ದಾರೆ. ಭಾಗ್ಯ ದಿವಾಣ, ದೀಕ್ಷಿತ್ ನಾಯರ್ ಹಾಗೂ ವಿನಯ್ ಖಾನ್ ಸಂಪಾದಕೀಯ ಬಳಗದಲ್ಲಿದ್ದಾರೆ. ಸುರೇಶ್ ಎನ್. ಪುಟ ವಿನ್ಯಾಸಕರಾಗಿದ್ದು, ಯಲ್ಲಪ್ಪ ವಿ. ಪ್ರಸರಣ ಅಧಿಕಾರಿ.
~ ಶ್ರೀರಾಮ ದಿವಾಣ