ಕನ್ನಡ ಪತ್ರಿಕಾ ಲೋಕ (ಭಾಗ ೨೨೪) - ಪದ್ಮಲೇಖ

ಪದ್ಮಶಾಲಿ ಮಹಾಸಭಾದ "ಪದ್ಮಲೇಖ"
ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳೂರು ಕಳೆದ ಐದು ವರ್ಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ " ಪದ್ಮಲೇಖ". ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳೂರು ಸಂಸ್ಥೆಯು ೧೯೪೬ರಲ್ಲಿ ಉಡುಪಿ - ಮಲ್ಪೆ ರಸ್ತೆಯ ಆದಿಉಡುಪಿಯಲ್ಲಿ ಸ್ಥಾಪನೆಗೊಂಡಿದ್ದು, ಇಲ್ಲಿನ ಪದ್ಮಶಾಲಿ ಸುವರ್ಣ ಮಹೋತ್ಸವ ಭವನದಲ್ಲಿ ಪತ್ರಿಕಾ ಕಾರ್ಯಾಲಯವಿರುತ್ತದೆ.
ಮುದ್ರಕರು ಮತ್ತು ಪ್ರಕಾಶಕರು ಮಂಗಳೂರಿನ ಜಯರಾಮ ಎಂ. ಡಿ. ಅವರಾಗಿರುತ್ತಾರೆ. ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ. ಪುಸ್ತಕ ರೂಪದಲ್ಲಿ ೬೦ ಪುಟಗಳಲ್ಲಿ ಬರುವ "ಪದ್ಮಲೇಖ" ದ ವಾರ್ಷಿಕ ಚಂದಾ ಮೊತ್ತ ನೂರು ರೂಪಾಯಿ.
ಕಾರ್ಕಳದ ರವಿ ಶೆಟ್ಟಿಗಾರ್ ಸಂಪಾದಕರು. ಲಕ್ಷ್ಮಣ್ ಕೊಡಿಯಾಲಬೈಲು ಸಹಸಂಪಾದಕರು. ವಿಟ್ಲದ ಗಿರೀಶ್ ಶೆಟ್ಟಿಗಾರ್ ಕಾರ್ಯನಿರ್ವಾಹಕ ಸಂಪಾದಕರು. ವಿಠಲ ಶೆಟ್ಟಿಗಾರ್ ಪೆರಂಪಳ್ಳಿ, ಡಾ. ಜಯರಾಮ ಬಾರ್ಕೂರು, ಶ್ರೀಮತಿ ಶೋಭಾ ಹರಿಪ್ರಸಾದ್ ಹಾಗೂ ಉಮೇಶ್ ಕುಮಾರ್ ಮಾರ್ಪಳ್ಳಿ ಸಂಪಾದಕ ಮಂಡಳಿ ಸದಸ್ಯರು. ಜಯರಾಮ ಮಣಿಪಾಲ, ಸುಧಾಕರ ಶೆಟ್ಟಿಗಾರ್ ಸಾಲಿಕೇರಿ, ಭಾಸ್ಕರ್ ಆರ್. ಶೆಟ್ಟಿಗಾರ್ ಆದಿಉಡುಪಿ, ಪುರಂದರ ಶೆಟ್ಟಿಗಾರ್ ಕಿನ್ನಿಗೋಳಿ, ಶ್ರೀಮತಿ ಲಲಿತಾ ಸತೀಶ್ ಶೆಟ್ಟಿಗಾರ್ ಅತ್ರಾಡಿ ಹಾಗೂ ಹರೀಶ್ ಶೆಟ್ಟಿಗಾರ್ ಜಾಹೀರಾತುದಾರರು ಮತ್ತು ಪತ್ರಿಕಾ ಪ್ರಚಾರಕರು. ಹರೀಶ್ ಕುಮಾರ್ ಮೂಲ್ಕಿ ವರದಿಗಾರರು. ಉಡುಪಿಯ ಡಾ. ಶಿವಪ್ರಸಾದ್ ತಾಂತ್ರಿಕ ಸಹಾಯಕರು. ಪದ್ಮಶಾಲಿ ಸಮುದಾಯದ ಮತ್ತು ಸಂಘಟನೆಯ ಚಿತ್ರ ಸಹಿತವಾದ ವರದಿಗಳು, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವೇ ಮೊದಲಾದ ವೈವಿಧ್ಯಮಯವಾದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ.
~ ಶ್ರೀರಾಮ ದಿವಾಣ