ಕನ್ನಡ ಪತ್ರಿಕಾ ಲೋಕ (ಭಾಗ ೪೫) - ಅಕ್ಷಯ ಮಿತ್ರ

ಕನ್ನಡ ಪತ್ರಿಕಾ ಲೋಕ (ಭಾಗ ೪೫) - ಅಕ್ಷಯ ಮಿತ್ರ

ಮೈಸೂರು ಜಿಲ್ಲೆಯಿಂದ ಎಂ. ಮಂಜುನಾಥ ರವರು ಮಾಲೀಕರು ಹಾಗೂ ಪ್ರಧಾನ ಸಂಪಾದಕರಾಗಿ ಪ್ರಕಟವಾಗುತ್ತಿದ್ದ ಪಾಕ್ಷಿಕ ಪತ್ರಿಕೆ ‘ಅಕ್ಷಯ ಮಿತ್ರ'. ಜುಲೈ ೨೦೧೦ರಂದು ಪ್ರಕಟಣೆಯನ್ನು ಪ್ರಾರಂಭಿಸಿದ ‘ಅಕ್ಷಯ ಮಿತ್ರ' ಟ್ಯಾಬಲಾಯ್ಡ್ ಆಕಾರದಲ್ಲಿ ೧೨ ಪುಟಗಳೊಂದಿಗೆ ಪ್ರಕಟವಾಗುತ್ತಿತ್ತು. ೧೨ ಪುಟಗಳಲ್ಲಿ ೪ ಪುಟಗಳು ವರ್ಣದಲ್ಲೂ ಉಳಿದ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲೂ ಹೊರಬರುತ್ತಿತ್ತು.

ಪತ್ರಿಕೆಯಲ್ಲಿ ರಾಜಕೀಯ ಸುದ್ಧಿಗಳೇ ಪ್ರಮುಖ ವಿಷಯವಾಗಿದ್ದರೂ ಸಾಮಾನ್ಯ ಜ್ಞಾನ, ನಗೆ ಹನಿ, ಸಿನೆಮಾ ರಂಜನೆ ಮೊದಲಾದ ವಿಷಯಗಳೂ ಇದ್ದುವು. ‘ರೆಡ್ ಲೈಟ್' ಎಂಬ ನೈಜ ಕಥಾನಕವು ಬಹಳ ರೋಚಕತೆಯನ್ನು ಸೃಷ್ಟಿಸಿತ್ತು. ಎಂ. ಮಂಜುನಾಥ್ ಪ್ರಧಾನ ಸಂಪಾದಕರಾಗಿಯೂ, ಕೃಷ್ಣೇಗೌಡ ಇವರು ವ್ಯವಸ್ಥಾಪಕ ಸಂಪಾದಕರಾಗಿಯೂ, ಜಿ.ಕೆ.ಎಂಬವರು ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. 

ಅಕ್ಷಯ ಮಿತ್ರ ಪತ್ರಿಕೆಗೆ ಶಶಿಧರ್ ಅವರು ಕಾನೂನು ಸಲಹೆಗಾರರಾಗಿಯೂ, ಎಂ. ಆರ್. ಸೋಮನಾಥ್ ಬೆಂಗಳೂರು ವರದಿಗಾರರಾಗಿಯೂ, ಬಿ.ಎನ್.ಪಾಟೀಲ್ ಯಾದಗಿರಿ ಹಾಗೂ ಉಮೇಶ್ ಎಸ್.ಕಡಕೊಳ ಇವರು ಇತರ ಜಿಲ್ಲೆಗಳ ವರದಿಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಪತ್ರಿಕೆಯ ಪ್ರಮುಖ ಅಂಶವೆಂದರೆ ರೂಪ ಕೃಷ್ಣಮೂರ್ತಿ ಹಾಗೂ ದೀಪಿಕ ಎಂಬ ಇಬ್ಬರು ಮಹಿಳೆಯರು ಮೈಸೂರಿನಿಂದ ವರದಿಗಾರರಾಗಿದ್ದರು. ಪತ್ರಿಕೆಯು ಪ್ರತೀ ಹದಿನೈದು ದಿನಗಳಿಗೊಮ್ಮೆ ಮೈಸೂರಿನ ಕಿರಣ್ ಪ್ರಿಂಟರ್ಸ್ ನಲ್ಲಿ ಮುದ್ರಣಗೊಂಡು ರಾಜ್ಯಾದ್ಯಂತ ಪ್ರಸಾರವಾಗುತ್ತಿತ್ತು. 

೨೦೧೬ ಜುಲೈ ತಿಂಗಳ ಬಿಡಿ ಪ್ರತಿಗೆ ರೂ ೧೦.೦೦ ಮುಖಬೆಲೆಯಿದ್ದು ವಾರ್ಷಿಕ ಚಂದಾ ರೂ ೩೦೦.೦೦ ಆಗಿತ್ತು. ‘ಅಕ್ಷಯ ಮಿತ್ರ' ಸತ್ಯಕ್ಕೆ ಹತ್ರ ಎಂಬುವುದು ಪತ್ರಿಕೆಯ ಟ್ಯಾಗ್ ಲೈನ್ ಆಗಿತ್ತು. 

-ಶ್ರೀರಾಮ ದಿವಾಣ