ಕನ್ನಡ ಪತ್ರಿಕಾ ಲೋಕ (ಭಾಗ ೪೬) - ಸುದ್ದಿ ಸ್ವಾರಸ್ಯಗಳ ಚುಟುಕ

ಕನ್ನಡ ಪತ್ರಿಕಾ ಲೋಕ (ಭಾಗ ೪೬) - ಸುದ್ದಿ ಸ್ವಾರಸ್ಯಗಳ ಚುಟುಕ

ಎರಡು ದಶಕಗಳ ಹಿಂದೆ ‘ಚುಟುಕ' ಎಂಬ ಜ್ಞಾನಾರ್ಜನೆಗೆ ಸಹಕಾರಿಯಾಗುವ ಮಾಸಿಕವೊಂದು ‘ಸಂಗಮ ಪ್ರಕಾಶನ' ಎಂಬ ಸಂಸ್ಥೆಯಿಂದ ಹೊರಬರುತ್ತಿತ್ತು. ಇಂಟರ್ನೆಟ್ ಇಲ್ಲದ ಆ ಸಮಯದಲ್ಲಿ ಈ ಮಾಸಿಕವೇ ಒಂದು ಡೈಜೆಸ್ಟ್ ಆಗಿತ್ತು. ಇದರ ಜನಪ್ರಿಯತೆಯನ್ನು ಗಮನಿಸಿ ಹೊರ ತಂದ ಮತ್ತೊಂದು ಪತ್ರಿಕೆಯೇ ‘ಸುದ್ದಿ ಸ್ವಾರಸ್ಯಗಳ ಚುಟುಕ'. ಹೆಸರು ಹೆಚ್ಚು ಕಮ್ಮಿ ಒಂದೇ ರೀತಿಯಾಗಿದ್ದುದರಿಂದ ಹಲವರಿಗೆ ಯಾವುದು ‘ನೈಜ’ ಪತ್ರಿಕೆ ಎಂದೇ ಗೋಜಲು. ಆದರೂ ಎರಡೂ ಪತ್ರಿಕೆಗಳು ಜ್ಞಾನಾರ್ಜನೆಗೆ ಬಹಳ ಸಹಕಾರಿಯಾಗಿದ್ದವು ಎನ್ನುವುದರಲ್ಲಿ ಎರಡು ಮಾತಿಲ್ಲ.

ಸುದ್ದಿ ಸ್ವಾರಸ್ಯಗಳ ಚುಟುಕವನ್ನು ಸಂಗಮ ಪಬ್ಲಿಕೇಷನ್ಸ್ ಪ್ರವೇಟ್ ಲಿಮಿಟೆಡ್, ಬೆಂಗಳೂರು ಇವರು ಪ್ರಕಾಶಿಸುತ್ತಿದ್ದರು. ಟಿ.ಜಿ.ನಾರಾಯಣ ಗೌಡ ಇವರು ಮಾಲೀಕರು ಹಾಗೂ ಸಂಪಾದಕರು ಆಗಿದ್ದರು. ಸುಧಾ, ತರಂಗ ಆಕಾರದ ಈ ಪತ್ರಿಕೆ ತಿಂಗಳಿಗೊಮ್ಮೆ ಬೆಂಗಳೂರಿನ ಅಪೂರ್ವ ಪ್ರಿಂಟರ್ಸ್ ನಿಂದ ಮುದ್ರಿತಗೊಂಡು ಹೊರ ಬರುತ್ತಿತ್ತು. 

ಪುಸ್ತಕದ ಪ್ರತೀ ಪುಟವೂ ಮಾಹಿತಿಪೂರ್ಣವಾಗಿತ್ತು. ‘ಗೂಗಲ್’ ಸಹಾಯ ಇಲ್ಲದ ಆ ಸಮಯದಲ್ಲಿ ಇಷ್ಟೆಲ್ಲಾ ಮಾಹಿತಿಯನ್ನು ಕಲೆ ಹಾಕುವುದು ಒಂದು ಸಾಹಸದ ಕಾರ್ಯವೇ ಆಗಿತ್ತು. ಪ್ರತೀ ಪುಟದಲ್ಲಿ ನುಡಿಮುತ್ತುಗಳು, ಪ್ರಶ್ನಾವಳಿಗಳು, ಚುಟುಕು ಸುದ್ದಿಗಳು ಇರುತ್ತಿದ್ದವು. ಕರ್ನಾಟಕ ಇತಿಹಾಸ, ರಾಷ್ಟ್ರೀಯ ವರ್ತಮಾನ, ಏಷ್ಯಾ ಖಂಡದ ಸುದ್ದಿಗಳು, ಭೂಮಿಯ ವೈಚಿತ್ರ್ಯಗಳು, ಆರೋಗ್ಯ ಸಂಬಂಧಿ ವಿಷಯಗಳು, ವಿಶೇಷ ಲೇಖನಗಳು ಈ ಪತ್ರಿಕೆಯಲ್ಲಿ ಅಡಕವಾಗಿದ್ದವು. 

ಪತ್ರಿಕೆಯನ್ನು ಜನಪ್ರಿಯಗೊಳಿಸಲು ಓದುಗರಿಗಾಗಿ ಬಹುಮಾನ ಯೋಜನೆಯನ್ನೂ ಆಯೋಜನೆ ಮಾಡುತ್ತಿದ್ದರು. ಈ ಪತ್ರಿಕೆಯ ಜೊತೆ ಕೆಲವೊಮ್ಮೆ ವಿಶೇಷ ಮಾಹಿತಿಗಳಿರುವ ಪುಟ್ಟ ಪುಸ್ತಕವೊಂದನ್ನು ಉಚಿತವಾಗಿ ನೀಡುತ್ತಿದ್ದರು. ೨೦೦೦ರಲ್ಲಿ ಪ್ರಾರಂಭವಾದ ಪತ್ರಿಕೆಯ ಬಿಡಿಪ್ರತಿಗೆ ೨೦೦೩ರಲ್ಲಿ ರೂ ೧೨.೦೦ ಮುಖ ಬೆಲೆ ಇತ್ತು. ವಾರ್ಷಿಕ ಚಂದಾ ೧೪೪.೦೦ ರೂ ಆಗಿತ್ತು. ಕ್ರಮೇಣ ಅಂತರ್ಜಾಲದ ಪ್ರಭಾವದಿಂದ ಸಾಮಾನ್ಯ ಜ್ಞಾನ ವೃದ್ಧಿಸುವ ಪತ್ರಿಕೆಗಳ ಸಂಖ್ಯೆ ಕಡಿಮೆಯಾಗಲು ತೊಡಗಿ ‘ಸುದ್ದಿ ಸ್ವಾರಸ್ಯಗಳ ಚುಟುಕ' ವೂ ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿತು.

-ಶ್ರೀರಾಮ ದಿವಾಣ