ಕನ್ನಡ ಪತ್ರಿಕಾ ಲೋಕ (ಭಾಗ ೫೦) - ಪಟ್ಟಾಂಗ ಪತ್ರಿಕೆ
ಮಂಗಳೂರಿನ ಪಾಕ್ಷಿಕ ಪತ್ರಿಕೆ "ಪಟ್ಟಾಂಗ ಪತ್ರಿಕೆ"
೧೯೯೮ - ೯೯ರ ಅವಧಿಯಲ್ಲಿ ಮಂಗಳೂರಿನಿಂದ ಆರಂಭವಾದ ಪಾಕ್ಷಿಕ, ಪಟ್ಟಾಂಗ ಪತ್ರಿಕೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಪ್ರಕಟಗೊಂಡ ಈ ಪತ್ರಿಕೆ ಅಂದಾಜು ೨೦೧೭ರ ಅವಧಿಯಲ್ಲಿ ಪ್ರಕಟಣೆಯನ್ನು ಸ್ಥಗಿತಗೊಳಿಸಿತು.
ಪಟ್ಟಾಂಗ ಪತ್ರಿಕೆಯನ್ನು ಆರಂಭಿಸಿದವರು ವಿಲ್ ಫ್ರೆಡ್ ಡಿ' ಸೋಜಾ, ರಾಜಾರಾಮ ತಲ್ಲೂರು, ಕೃಷ್ಣಮೂರ್ತಿ ಚಿತ್ರಾಪುರ ಹಾಗೂ ಆಂಡೋಪೌಲ್ ಪುತ್ತೂರು ಎಂಬ ನಾಲ್ವರು ಅನುಭವಿಗಳ ತಂಡ. ಆದರೆ ಭಿನ್ನಾಭಿಪ್ರಾಯದ ಕಾರಣಕ್ಕೆ ಕೆಲವೇ ವರ್ಷಗಳಲ್ಲಿ ಒಬ್ಬೊಬ್ಬರಾಗಿಯೇ ಕಳಚಿಕೊಂಡು ಬಳಿಕ ಪತ್ರಿಕೆಯನ್ನುಮುನ್ನಡೆಸಿದವರು ಆಂಡೋಪೌಲ್ ಪುತ್ತೂರು.
ಟ್ಯಾಬ್ಲಾಯ್ಡ್ ಆಕಾರದ, ೧೨ ಪುಟಗಳಲ್ಲಿ ಬರುತ್ತಿದ್ದ ಪಟ್ಟಾಂಗದ ಜೊತೆಗೆ, ತಿಂಗಳಿಗೊಂದು ಅಥವಾ ಎರಡು ತಿಂಗಳಿಗೊಂದರಂತೆ ಹಲವು ಪುಟಗಳ ವಿಶೇಷಾಂಕವನ್ನೂ ಪ್ರಕಟಿಸಲಾಗುತ್ತಿತ್ತು. ಈ ವಿಶೇಷಾಂಕ ಹೆಚ್ಚಾಗಿ ಜಾಹೀರಾತು ಕೇಂದ್ರಿತವಾಗಿರುತ್ತಿತ್ತು.
ಪ್ರಕಾಶ್ ಪಿಂಟೊ ಪಟ್ಟಾಂಗದ ಮುಖ್ಯ ವರದಿಗಾರರಾಗಿದ್ದರು. ಪತ್ರಿಕೆಯ ಆರಂಭದಿಂದ ಕೊನೆಯ ಸಂಚಿಕೆಯವರೆಗೂ ವರದಿಗಾರರಾಗಿದ್ದವರು ಹಿರಿಯ ಪತ್ರಕರ್ತರಾದ ಕುಂದಾಪುರದ ರಾಮಕೃಷ್ಣ ಹೇರ್ಳೆಯವರು. ಸುದಾನಂದ, ದಿನೇಶ್, ಜಗದೀಶ್ ಆರ್ ಬಿ, ಇಸ್ಮಾಯಿಲ್ ಮೂಡುಶೆಡ್ಡೆ, ಪುಷ್ಪರಾಜ ಬಿ ಎನ್ ಹಾಗೂ ಇನ್ನೂ ಕೆಲವರು ಕೆಲ ಕಾಲ ಪತ್ರಿಕೆಯ ಪ್ರಸರಣ, ಜಾಹೀರಾತು ಮತ್ತು ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದವರು. ಶ್ರೀರಾಮ ದಿವಾಣ ವರದಿಗಾರರಾಗಿದ್ದರು.
ಆರಂಭದಲ್ಲಿ ಮಂಗಳೂರಿನ ಪ್ರಕಾಶ್ ಅಫ್ ಸೆಟ್ ನಲ್ಲಿ ಮುದ್ರಣವಾಗುತ್ತಿದ್ದ ಪಟ್ಟಾಂಗ ಪತ್ರಿಕೆ, ಬಳಿಕ ದಿಗಂತ ಮುದ್ರಣಾಲಯದಲ್ಲಿ ಮುದ್ರಣವಾಗುತ್ತಿತ್ತು. ಕೆಲ ಕಾಲ ಮಂಗಳೂರು ಮಿತ್ರ ಮುದ್ರಣಾಲಯದಲ್ಲೂ, ಬೆಂಗಳೂರಿನ ಮುದ್ರಣಾಲಯದಲ್ಲೂ ಮುದ್ರಣವಾದದ್ದಿದೆ.
ಮಂಗಳೂರಿನ ಬಲ್ಮಠದಲ್ಲಿರುವ ಆರ್ಯ ಸಮಾಜದ "ಶ್ರದ್ಧಾನಂದ ಸೇವಾಶ್ರಮ"ದಲ್ಲಿ ಆಶ್ರಮದ ಕಾರ್ಯದರ್ಶಿಯಾಗಿದ್ದ ದೇವವ್ರತ ಎಂಬಾತ ಆಶ್ರಮದ ಹೆಣ್ಮಕ್ಕಳ ಹಾಸ್ಟೆಲ್ ನಲ್ಲಿ ವಾಸ್ತವ್ಯವಿದ್ದ ಎಂಟಕ್ಕೂ ಅಧಿಕ ಅಪ್ರಾಪ್ತ ಪ್ರಾಯದ ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣವನ್ನು ಅತ್ಯಂತ ಚಾಣಕ್ಷತೆಯಿಂದ ತನಿಖೆ ನಡೆಸಿ ಹೊರಗೆಡಹಿ ದೇವವ್ರತ ಜೈಲು ಪಾಲಾಗುವಂತೆ ಮಾಡಿದ್ದು ಇದೇ ಪಟ್ಟಾಂಗ ಪತ್ರಿಕೆಯ ತನಿಖಾ ಪತ್ರಿಕೋದ್ಯಮ. ಈ ತನಿಖಾ ತಂಡದಲ್ಲಿ ಕೆಲಸ ಮಾಡಿದ ಪ್ರಮುಖರಲ್ಲೊಬ್ಬರು ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಅವರು. ಈ ತನಿಖಾ ವರದಿ ಅಂದು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ ಲೈಂಗಿಕ ಹಗರಣವಾಗಿತ್ತು. ಸಂತ್ರಸ್ತ, ನೊಂದ ಹೆಣ್ಮಕ್ಕಳು ನೀಡಿದ ಹೇಳಿಕೆಗಳು, ಸಾಕ್ಷ್ಯ "ನಂಬಿಕೆಗೆ ಅರ್ಹವಲ್ಲ" ಎಂಬ ತೀರ್ಪಿನೊಂದಿಗೆ ರಾಜ್ಯಾದ್ಯಂತ ಸುದ್ದಿ ಮಾಡಿದ, ವ್ಯಾಪಕ ಚರ್ಚೆಗೆ ಕಾರಣವಾದ ಲೈಂಗಿಕ ಹಗರಣ ಪ್ರಕರಣ ಖುಲಾಸೆಗೊಂಡಿತ್ತು.
~ ಶ್ರೀರಾಮ ದಿವಾಣ, ಉಡುಪಿ