ಕನ್ನಡ ಪತ್ರಿಕಾ ಲೋಕ (ಭಾಗ ೫೧) - ಜಸ್ಟ್ ಟೈಂ ಪಾಸ್

ಕನ್ನಡ ಪತ್ರಿಕಾ ಲೋಕ (ಭಾಗ ೫೧) - ಜಸ್ಟ್ ಟೈಂ ಪಾಸ್

ಅಶ್ವಿನ್ ಪದವಿನಂಗಡಿ ಅವರ "ಜಸ್ಟ್ ಟೈಂ ಪಾಸ್"

ಮಂಗಳೂರಿನ ಪತ್ರಕರ್ತ, ಲೇಖಕ ಅಶ್ವಿನ್ ಪದವಿನಂಗಡಿ (ಕೆ ಪಿ ಅಶ್ವಿನ್ ರಾವ್) ಅವರು ಹೊರತರುತ್ತಿದ್ದ ಮಾಸಿಕ "ಜಸ್ಟ್ ಟೈಂ ಪಾಸ್". ೨೦೧೦ರ ನವೆಂಬರ್ ತಿಂಗಳ ಸಂಚಿಕೆಯೊಂದಿಗೆ ಆರಂಭಿಸಿದ " ಜಸ್ಟ್ ಟೈಂ ಪಾಸ್", ನಾಲ್ಕು ಪುಟಗಳ ಸಣ್ಣ ಪತ್ರಿಕೆಯಾದರೂ, ವೈವಿಧ್ಯಮಯ ಬರಹಗಳಿಂದ ಕೂಡಿ ಆಕರ್ಷಕವಾಗಿ ಬರುತ್ತಿತ್ತು.

ಸಂಪಾದಕೀಯ, ವ್ಯಕ್ತಿತ್ವ ವಿಕಸನ, ಹಾಸ್ಯ, ಉಪಯುಕ್ತ ಮಾಹಿತಿಗಳು, ಸಾಮಾನ್ಯ ಜ್ಞಾನ, ಹೊಸರುಚಿ, ಲೇಖನ, ಪ್ರಬಂಧ, ಕವನ, ಸಾಹಿತ್ಯಿಕ ಬರಹಗಳು ಹೀಗೆ ವಿವಿಧ ವಿಷಯ - ವಿಚಾರ - ವಿನೋದಗಳಿಗೆ ಸಂಬಂಧಿಸಿದ ಬರಹಗಳು "ಜಸ್ಟ್ ಟೈಂ ಪಾಸ್" ನಲ್ಲಿ ಪ್ರಕಟವಾಗುತ್ತಿದ್ದುವು. ತಮ್ಮ ಜೀವನದಲ್ಲಿ ಅನುಭವಿಸಿದ ಸ್ವಾರಸ್ಯಕರವಾದ ಘಟನೆಗಳನ್ನು ಟೈಂ ಪಾಸ್ ನಲ್ಲಿ ಧಾರಾವಾಹಿಯ ರೂಪದಲ್ಲಿ ಬರೆಯುತ್ತಿದ್ದರು. 

ಪತ್ರಿಕಾ ರಂಗದ ಮೇಲಿರುವ ಪ್ರೀತಿಯ ಸೆಳೆತ ಮತ್ತು ಬರಹ ಲೋಕದ ಜೊತೆಗೆ ಇಟ್ಟುಕೊಂಡಿದ್ದ ನಿರಂತರವಾದ ಸಂಬಂಧದ ದ್ಯೋತಕವಾಗಿ ಕೆ. ಪಿ. ಅಶ್ವಿನ್ ರಾವ್ ಅವರು ಈ ಪತ್ರಿಕೆಯನ್ನು ಹೊರತರುತ್ತಿದ್ದರು. ಐದು ಸಂಚಿಕೆಗಳನ್ನು ಮಾತ್ರ ಹೊರ ತಂದಿದ್ದ ಇವರು ನಂತರದ ದಿನಗಳಲ್ಲಿ ಯಾಕೋ ಪತ್ರಿಕೆಯನ್ನು ಹೊರ ತರುವ ಮನಸ್ಸು ಮಾಡಲಿಲ್ಲ. ಎಪ್ರಿಲ್ ೨೦೧೧ರ ಸಂಚಿಕೆಯೇ ಕೊನೆಯ ಸಂಚಿಕೆಯಾಗಿತ್ತು. ಪತ್ರಿಕೆಗೆ ಯಾವ ಮುಖ ಬೆಲೆ ಇರಲಿಲ್ಲ. 

ಇವರು ಪತ್ರಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರಲಿಲ್ಲ. ಹಣ ಮಾಡುವ ಉದ್ಧೇಶವೇ ಸಂಪಾದಕರಿಗೆ ಇಲ್ಲಿ ಇರಲಿಲ್ಲ. ಹಾಗಾಗಿ "ಜಸ್ಟ್ ಟೈಂ ಪಾಸ್" ಆತ್ಮೀಯರಿಗೆ ಮತ್ತು ಪರಿಚಿತರಿಗೆ ಮಾತ್ರ ಹಂಚಿಕೆಯಾಗುತ್ತಿತ್ತು. ಒಂದು ತಿಂಗಳ ಪತ್ರಿಕೆಯನ್ನು ಯಾರಾದರೂ ಹಿತೈಷಿಗಳು ಪ್ರಾಯೋಜಕತ್ವ ಮಾಡುವ ಯೋಜನೆ ಇತ್ತು. ಯಾವುದೇ ಪ್ರಾಯೋಜಕತ್ವ ಸಿಗದಿದ್ದಾಗ ಆವರೇ ಸ್ವತಃ ಹಣ ಹಾಕಿ ಪತ್ರಿಕೆಯನ್ನು ಮುದ್ರಿಸಿ ತಮ್ಮ ಆತ್ಮೀಯರಿಗೆ ಉಚಿತವಾಗಿ ಹಂಚುತ್ತಿದ್ದರು. ಮುಂದಿನ ದೀಪಾವಳಿ ಸಮಯಕ್ಕೆ ಮತ್ತೆ ಪತ್ರಿಕೆಯನ್ನು ಹೊರತರುವ ಯೋಚನೆ ಇದೆಯಂತೆ. ನಿಜಕ್ಕೂ ‘ಜಸ್ಟ್ ಟೈಂ ಪಾಸ್' ಪತ್ರಿಕೆ ಸಂಪಾದಕರ ಮನಸ್ಸಿನ ಖುಷಿ-ಬೇಸರವನ್ನು ಹಂಚಿಕೊಳ್ಳುವುದಕ್ಕೆ ವೇದಿಕೆಯಾಗಿತ್ತು. ಅದರ ಜೊತೆಗೆ ಓದುವವರಿಗೂ ಏನೋ ಒಂದು ಆತ್ಮೀಯತೆಯ ಅನುಭವವಾಗುತ್ತಿತ್ತು.  

~ ಶ್ರೀರಾಮ ದಿವಾಣ, ಉಡುಪಿ