ಕನ್ನಡ ಪತ್ರಿಕಾ ಲೋಕ (ಭಾಗ ೫೪) - ಹೊಂಗನಸು

ಕನ್ನಡ ಪತ್ರಿಕಾ ಲೋಕ (ಭಾಗ ೫೪) - ಹೊಂಗನಸು

‘ಹೊಂಗನಸು' - ಮನದ ಕನಸಿನ ಬೆನ್ನೇರಿ... ಎಂಬ ಸಾಹಿತ್ಯ ಪತ್ರಿಕೆಯ ಮೂರನೇ ಪ್ರಾಯೋಗಿಕ ಸಂಚಿಕೆ ನಮ್ಮಲ್ಲಿದೆ. ಮುಂದಿನ ಸಂಚಿಕೆಗಳು ಹೊರ ಬಂದಿವೆಯೇ ಎನ್ನುವ ಮಾಹಿತಿ ತಿಳಿದು ಬರುತ್ತಿಲ್ಲವಾದರೂ, ಪ್ರಾಯೋಗಿಕ ಸಂಚಿಕೆಯಲ್ಲೇ ಭರವಸೆ ಮೂಡಿಸಿದ ಪತ್ರಿಕೆ ಎಂದು ಹೇಳಬಹುದಾಗಿದೆ. 

ಟ್ಯಾಬಲಾಯ್ಡ್ ಆಕಾರದ ೮ ಪುಟಗಳ ವರ್ಣರಂಜಿತ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಯಾದದ್ದು ಅಕ್ಟೋಬರ್-ನವೆಂಬರ್ ೨೦೧೬ರ ಸಮಯದಲ್ಲಿರಬಹುದು. ಏಕೆಂದರೆ ಪತ್ರಿಕೆಯಲ್ಲಿ ಎಲ್ಲಿಯೂ ಇದರ ಪ್ರಕಟಣಾ ಕಾಲಾವಧಿಯನ್ನು ನಮೂದಿಸಿಲ್ಲ. ಈ ಕಾರಣದಿಂದ ವಾರ, ಪಾಕ್ಷಿಕ ಅಥವಾ ಮಾಸ ಪತ್ರಿಕೆ ಎಂದು ತಿಳಿದುಕೊಳ್ಳಲು ಅಸಾಧ್ಯವಾಗಿದೆ. 

ಪತ್ರಿಕೋದ್ಯಮ ವಿದ್ಯಾರ್ಥಿಯಾದ ನಿರಂಜನ ಕಡ್ಲಾರು ಇದರ ಸಂಪಾದಕರು, ಮುದ್ರಕರು ಹಾಗೂ ಪ್ರಕಾಶಕರು. ಇವರಿಗೆ ಬೆನ್ನೆಲುಬಾಗಿ ಮಾರ್ಗದರ್ಶಕರ ರೂಪದಲ್ಲಿ ಮೌಲ್ಯ ಜೀವನ್ ರಾಂ, ಶ್ರೀನಿವಾಸ ಪೆಜತ್ತಾಯ, ಜೈಸನ್ ತಾಕೋಡೆ (ಟೈಮ್ಸ್ ಆಫ್ ಬೆದ್ರ ಪತ್ರಿಕೆಯ ಸಂಪಾದಕರು) ಇದ್ದಾರೆ. ಸಹಾಯಕರಾಗಿ ಪ್ರಕಾಶ್ ಡಿ ರಾಂಪುರ್, ವೀರೇಶ್, ಶ್ರೀಪ್ರಿಯಾ ಪುಣಿಚಿತ್ತಾಯ, ಅನ್ವಯ ಮೂಡಬಿದರೆ, ರಮ್ಯ ಜಿ, ಅಕ್ಷತಾ ನಾಡಿಗ್, ಕೀರ್ತನ್ ಶೆಟ್ಟಿ ಹಾಗೂ ನಿಶಾನ್ ಕೋಟ್ಯಾನ್ ಇದ್ದಾರೆ. 

ನಮ್ಮಲ್ಲಿ ಲಭ್ಯ ಇರುವ ಪತ್ರಿಕೆಯು ಮೂರನೇ ಪ್ರಾಯೋಗಿಕ ಸಂಚಿಕೆ. ಇದರಲ್ಲಿ ಶ್ರೀನಿವಾಸ ಪೆಜತ್ತಾಯರ ‘ಪಚಲಿತ ವಿದ್ಯಮಾನ', ಉಪನ್ಯಾಸಕ, ಸಾಹಿತಿ ಡಾ.ಧನಂಜಯ ಕುಂಬ್ಳೆ ಅವರ ಎರಡು ಕಥೆಗಳು, ಟಿ ಎ ಎನ್ ಖಂಡಿಗೆ, ವೇಣುಗೋಪಾಲ ಶೆಟ್ಟಿ ಕೆ, ಗೀತಾ ಬಿಳಿನೆಲೆ, ರುಚಿಕಾ ಮುಂತಾದವರ ಬರಹಗಳು ಇವೆ. ‘ಕಾಸರಗೋಡಿನ ಮೊದಲ ಪತ್ರಿಕೆ'ಯ ಬಗ್ಗೆ ಪುಟ್ಟ ಮಾಹಿತಿ ನೀಡಿದ್ದಾರೆ ಪ್ರವೀಣ ಪದ್ಯಾಣ ಇವರು. ಸಾಹಿತ್ಯಕ್ಕೆ ಸಂಬಂಧಿಸಿದ ಪತ್ರಿಕೆಯಾದುದರಿಂದ ಪ್ರತೀ ಪುಟದಲ್ಲಿ ಪುಟ್ಟ ಪುಟ್ಟ ಕವನಗಳನ್ನು ಪ್ರಕಟಿಸಿದ್ದಾರೆ. 

ಪತ್ರಿಕೆಯಲ್ಲಿ ಎಲ್ಲೂ ಬಿಡಿ ಪ್ರತಿಯ ಬೆಲೆ, ಚಂದಾದಾರಿಕೆಯ ಕುರಿತಾದ ಮಾಹಿತಿ, ಮುದ್ರಣವಾಗುವ ಸ್ಥಳದ ಮಾಹಿತಿ ಇಲ್ಲ. ಪ್ರಾಯೋಗಿಕ ಪತ್ರಿಕೆಯು ಮುಂದಿನ ದಿನಗಳಲ್ಲಿ ನಿಯಮಿತವಾಗಿ ಹೊರಬಂದಿದೆಯೇ ಎಂಬ ಬಗ್ಗೆಯೂ ಸಂಶಯ ಕಾಡುತ್ತಿದೆ. 

-ಶ್ರೀರಾಮ ದಿವಾಣ, ಉಡುಪಿ