ಕನ್ನಡ ಪತ್ರಿಕಾ ಲೋಕ ( ಭಾಗ ೫೭) - ಪೊಸಡಿ ಗುಂಪೆ

ಕನ್ನಡ ಪತ್ರಿಕಾ ಲೋಕ ( ಭಾಗ ೫೭) - ಪೊಸಡಿ ಗುಂಪೆ

ಗಡಿನಾಡ ಕನ್ನಡಿಗರ ದರ್ಪಣ-’ಪೊಸಡಿ ಗುಂಪೆ' ಎಂಬ ಮಾಸ ಪತ್ರಿಕೆ ಜಾನ್ ಡಿ. ಕಯ್ಯಾರ್ (ಜೆ.ಡಿ. ಕಯ್ಯಾರ್) ಇವರ ಸಂಪಾದಕತ್ವದಲ್ಲಿ ಕಾಸರಗೋಡು ಜಿಲ್ಲೆಯಿಂದ ಹೊರಬರುತ್ತಿತ್ತು. ಖಾಸಗಿ ಪ್ರಸಾರಕ್ಕೆ ಮಾತ್ರ ಮೀಸಲಾಗಿದ್ದ ‘ಪೊಸಡಿ ಗುಂಪೆ' ಪತ್ರಿಕೆಯು ‘ಸುಧಾ’ ಆಕೃತಿಯಲ್ಲಿದ್ದು, ೨೪ ಪುಟಗಳನ್ನು ಹೊಂದಿತ್ತು. ೨೦೧೮-೧೯ರಲ್ಲಿ ಪ್ರಾರಂಭವಾಗಿದ್ದ ಪತ್ರಿಕೆಯು ಡಿಸೆಂಬರ್ ೨೦೨೧ರ ಸಂಚಿಕೆಯೊಂದಿಗೆ ಈಗ ತಾತ್ಕಾಲಿಕ ವಿರಾಮದಲ್ಲಿದೆ.

ಗಡಿನಾಡ ಕಾಸರಗೋಡಿನಲ್ಲಿ ಒಂದು ಸಮಯದಲ್ಲಿ ಬಹಳಷ್ಟು ಕನ್ನಡ ಪತ್ರಿಕೆಗಳು ಪ್ರಕಟವಾಗುತ್ತಿದ್ದುವು. ಆದರೆ ಈಗ ಇವುಗಳ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ಪೊಸಡಿ ಗುಂಪೆಯ ಮುಖಪುಟ ವರ್ಣಮಯವಾಗಿದ್ದು, ಒಳಪುಟಗಳು ಕಪ್ಪು ಬಿಳುಪಾಗಿದ್ದವು. ಪತ್ರಿಕೆಯಲ್ಲಿ ಸಾಹಿತ್ಯ, ಆರೋಗ್ಯ ಸಂಬಂಧಿ ಲೇಖನಗಳು ಪ್ರಕಟವಾಗುತ್ತಿದ್ದವು. ಇದರ ಜೊತೆಗೆ ಕಥೆ, ಕವನಗಳೂ ಮುದ್ರಿತವಾಗುತ್ತಿದ್ದವು. ಜೆ.ಡಿ. ಕಯ್ಯಾರ್ ಅವರು ಕಾರ್ಯಕಾರಿ ಪ್ರಧಾನ ಸಂಪಾದಕರೂ, ಅಶೋಕ್ ಪೆರ್ಮುದೆ ಇವರು ಜಾಹೀರಾತು ವಿಭಾಗದ ವ್ಯವಸ್ಥಾಪಕರೂ, ಅಡ್ವ ಥೋಮಸ್ ಡಿ'ಸೋಜ ಎಂ.ಎಸ್. ಇವರು ಕಾನೂನು ಸಲಹೆಗಾರರಾಗಿಯೂ, ನಾರಾಯಣ ನಾಯ್ಕ್, ಕುದ್ಕೋಳಿ ಇವರು ಗೌರವ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಮಂಗಳೂರಿನ ಅಳಕೆಯಲ್ಲಿರುವ ಪ್ರಿಂಟ್ ಡಿಸೈನ್ ಇಲ್ಲಿ ವಿನ್ಯಾಸವಾಗಿ, ಮುದ್ರಿತವಾಗುತ್ತಿತ್ತು. 

ಪತ್ರಿಕೆಗೆ ದಂತ ವೈದ್ಯರಾದ ಡಾ. ಮುರಳಿ ಮೋಹನ ಚೂಂತಾರು, ಸುಭಾಷ್ ಪೆರ್ಲ, ‘ಜೀವಿ' ಗಂಗೇನೀರು, ರೇಷ್ಮಾ ಬೈದಿಲ ಇವರೆಲ್ಲಾ ಲೇಖನಗಳನ್ನು ಬರೆಯುತ್ತಿದ್ದರು. ಡಿಸೆಂಬರ್ ೨೦೨೧ರ ಸಂಚಿಕೆಯಲ್ಲಿ ಬಿಡಿಪ್ರತಿಯ ಮಾರಾಟದ ಬೆಲೆಯನ್ನು ನಮೂದಿಸಿಲ್ಲ.