ಕನ್ನಡ ಪತ್ರಿಕಾ ಲೋಕ (ಭಾಗ ೬೦) - ಸಿನಿರೇಖಾ
ಚಲನ ಚಿತ್ರಗಳ ಸಮಗ್ರ ಸುದ್ದಿಗಳನ್ನು ತಿಳಿಸುವ ವಾರ ಪತ್ರಿಕೆ- ಸಿನಿರೇಖಾ. ೯೦ರ ದಶಕದಲ್ಲಿ ಅಂತರ್ಜಾಲ ಇಲ್ಲದ ಸಮಯದಲ್ಲಿ ಚಲನ ಚಿತ್ರಗಳ ಹಾಗೂ ಚಿತ್ರರಂಗದ ಬಗ್ಗೆ ತಿಳಿಸಲು ಇದ್ದ ಏಕೈಕ ಮಾಧ್ಯಮ ಎಂದರೆ ಸಿನೆಮಾ ಪತ್ರಿಕೆಗಳು. ಸಿನೆಮಾ ಮಾಸಿಕಗಳು ಹಲವಾರು ಇದ್ದರೂ ವಾರ ಪತ್ರಿಕೆಯೊಂದರ ಕೊರತೆ ಇತ್ತು. ಇದನ್ನು ನೀಗಿಸಲು ಸಂಗಮ ಪ್ರಕಾಶನ ಇವರು ಹೊರ ತರುತ್ತಿದ್ದ ವಾರ ಪತ್ರಿಕೆಯೇ ‘ಸಿನಿರೇಖಾ’.
ಸಂಗಮ ಪ್ರಕಾಶನ ಇವರು ಆ ಸಮಯದಲ್ಲಿ ಕಾದಂಬರಿ ಪ್ರಿಯರಿಗಾಗಿ ರಾಗ ಸಂಗಮ, ಪತ್ತೇದಾರಿ ಕಥೆಗಳನ್ನು ಓದುವವರಿಗೆ ‘ಇದು ಕ್ರೈಂ ಕಾದಂಬರಿ' , ಜ್ಞಾನಾರ್ಜನೆಗಾಗಿ ಚುಟುಕ, ಧಾರಾವಾಹಿ ಓದುಗರಿಗೆ ‘ಉತ್ತಮ ಧಾರಾವಾಹಿ ಸಾಪ್ತಾಹಿಕ' ಮೊದಲಾದ ಪತ್ರಿಕೆಗಳನ್ನು ಹೊರತರುತ್ತಿದ್ದರು. ಇದರ ಜೊತೆಗೆ ಸಿನಿಪ್ರಿಯರಿಗಾಗಿ ಸಿನಿರೇಖಾವೂ ಹೊರ ಬರುತ್ತಿತ್ತು.
ಪತ್ರಿಕೆಯು ತುಷಾರ, ಮಯೂರ ಆಕೃತಿಯಲ್ಲಿದ್ದು ೪೪ ಪುಟಗಳನ್ನು ಹೊಂದಿತ್ತು. ಮುಖಪುಟವು ವರ್ಣರಂಜಿತವಾಗಿದ್ದು, ಒಳಪುಟಗಳು ಕಪ್ಪು ಬಿಳುಪು ಆಗಿದ್ದವು. ಚಿತ್ರರಂಗದ ಆಗುಹೋಗುಗಳು, ಕಲಾವಿದರ ಸಂದರ್ಶನ, ಡಾ. ರಾಜ್ ಇವರ ಜೀವನ ಚರಿತ್ರೆ, ಸಿನೆಮಾ ಚಿತ್ರೀಕರಣದ ಸುದ್ದಿಗಳು, ದೇಶ ವಿದೇಶಗಳ ಸಿನೆಮಾ ಸುದ್ದಿಗಳು ಪ್ರಕಟವಾಗುತ್ತಿದ್ದವು. ಓದುಗರನ್ನು ಆಕರ್ಷಿಸಲು ಕೆಲವು ಬಹುಮಾನ ಯೋಜನೆಗಳನ್ನೂ ಹಮ್ಮಿಕೊಳ್ಳುತ್ತಿದ್ದರು. ಕ್ಯಾಸೆಟ್ ಬಹುಮಾನ, ನಗದು ಬಹುಮಾನ ಎಲ್ಲವೂ ಇತ್ತು.
ಕನ್ನಡ ಚಿತ್ರರಂಗದ ಬಗ್ಗೆ ತಿಳಿಯುವ ಆಸಕ್ತಿ ಇದ್ದವರು ಪ್ರಶ್ನೆಗಳನ್ನು ಕೇಳಿದರೆ ಉತ್ತರವೂ ‘ಸಿನಿ ಪ್ರಶ್ನೋತ್ತರ' ವಿಭಾಗದಲ್ಲಿ ಸಿಗುತ್ತಿತ್ತು. ಈ ಪುಸ್ತಕದ ಪ್ರಮುಖ ಆಕರ್ಷಣೆ ಎಂದರೆ ಪ್ರತೀ ವಾರ ಕನ್ನಡ ಚಿತ್ರರಂಗದ ಓರ್ವ ಕಲಾವಿದರ ವಿಳಾಸವನ್ನು ಪ್ರಕಟಿಸುತ್ತಿದ್ದರು. ಕನ್ನಡ ಚಿತ್ರರಂಗದ ಇತಿಹಾಸವನ್ನು ತಿಳಿಸುವ ‘ಕನ್ನಡ ಚಿತ್ರ ಚರಿತ್ರೆ' ಹಾಗೂ ಕನ್ನಡ ಚಿತ್ರವೊಂದರ ಸಂಭಾಷಣೆ ನೀಡುತ್ತಿದ್ದುದು ಈ ಪತ್ರಿಕೆಯ ಹೈಲೈಟ್ ಆಗಿತ್ತು. ಓದುಗರು ತಾವು ನೋಡಿದ ಚಿತ್ರದಿಂದ ‘ನಾ ಮೆಚ್ಚಿದ ದೃಶ್ಯ' ವನ್ನು ಬರೆದು ಕಳುಹಿಸಿದರೆ ಪ್ರಕಟಿಸಿ ನಗದು ಬಹುಮಾನವನ್ನೂ ನೀಡುತ್ತಿದ್ದರು.
೧೯೯೧-೯೨ರ ಆಸುಪಾಸಿನಲ್ಲಿ ಆರಂಭವಾದ ಪತ್ರಿಕೆ ಹಲವಾರು ಸಮಯದವರೆಗೆ ಹೊರ ಬರುತ್ತಿತ್ತು. ಕ್ರಮೇಣ ಅಂತರ್ಜಾಲ ಚಟುವಟಿಕೆಗಳು, ದೂರದರ್ಶನದ ಜನಪ್ರಿಯತೆಯಿಂದಾಗಿ ಸಿನಿರೇಖಾ ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿತು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ಫೆಬ್ರವರಿ ೧೯೯೪ರ ಸಂಚಿಕೆಯಾಗಿದ್ದು ಮುಖಬೆಲೆ ರೂ.೨.೮೦ ಆಗಿತ್ತು. ಪತ್ರಿಕೆಯು ಬೆಂಗಳೂರಿನ ರವಿ ಡಿಟಿಪಿ ಸಿಸ್ಟಮ್ಸ್ ಆಂಡ್ ಸರ್ವಿಸಸ್ ನಿಂದ ಮುದ್ರಣಗೊಂಡು, ಬೆಂಗಳೂರಿನ ಸಂಗಮ ಪ್ರಕಾಶನದಿಂದ ಪ್ರಕಾಶಿತಗೊಳ್ಳುತ್ತಿತ್ತು. ಎನ್ ಸುಂದರ್ ರಾಜನ್ ಅವರು ಪ್ರಧಾನ ಸಂಪಾದಕರಾಗಿಯೂ, ಕಮಲಾ ಸುಂದರ್ ರಾಜನ್ ಇವರು ಸಂಪಾದಕಿಯಾಗಿಯೂ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.