ಕನ್ನಡ ಪತ್ರಿಕಾ ಲೋಕ (ಭಾಗ - ೬೩) - ಶ್ರೀಸುಧಾ
ಶ್ರೀ ಜಯಸತ್ಯ ಪ್ರಮೋದನಿಧಿಯ ಮುಖಪತ್ರಿಕೆ 'ಶ್ರೀಸುಧಾ'. ಶ್ರೀಮದಾಚಾರ್ಯರ ದಿವ್ಯಸಿದ್ಧಾಂತಗಳನ್ನು ಪ್ರತಿಬಿಂಬಿಸುವ, ವ್ಯಾಸ-ದಾಸ ಸಾಹಿತ್ಯದ ಚಿಂತನ-ಮಂಥನ, ಧರ್ಮ, ವಿಜ್ಞಾನ, ಇತಿಹಾಸ, ಸಾಮಾಜಿಕ ಇತ್ಯಾದಿ ವಿಷಯಗಳನ್ನೊಳಗೊಂಡ ಲೇಖನಗಳ ಮಾಲಿಕೆ ಈ ಪತ್ರಿಕೆ. ಕಳೆದ ೭೦ ವರ್ಷಗಳಿಂದ ಪ್ರಕಟಿಸಲಾಗುತ್ತಿರುವ ಈ ಧಾರ್ಮಿಕ ಮಾಸಪತ್ರಿಕೆಯು ಸಮಸ್ತ ಸಜ್ಜನ ವೃಂದವು ಜಿಜ್ಞಾಸು ಹೊಂದಿರಬೇಕಾದ ಉಪಯುಕ್ತ ಮಾಸಪತ್ರಿಕೆಯಾಗಿದೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ಜುಲೈ ೨೦೦೭ರದ್ದಾಗಿದೆ. ಪತ್ರಿಕೆಯು ತುಷಾರ-ಮಯೂರ ಆಕಾರದ್ದಾಗಿದ್ದು ೫೬ ಪುಟಗಳನ್ನು ಹೊಂದಿದೆ. ಮುಖಪುಟ ಸೇರಿದಂತೆ ನಾಲ್ಕು ಪುಟಗಳು ವರ್ಣರಂಜಿತವಾಗಿದ್ದು ಉಳಿದ ಪುಟಗಳು ಕಪ್ಪು ಬಿಳುಪು. ಪರಮಪೂಜ್ಯ ಶ್ರೀಶ್ರೀ ೧೦೦೮ ಶ್ರೀ ಸತ್ಯ ಪ್ರಮೋದ ತೀರ್ಥ ಶ್ರೀಪಾದಂಗಳವರು ಇದರ ಸಂಸ್ಥಾಪಕರಾಗಿದ್ದು, ಪಂ. ಜಯತೀರ್ಥಾಚಾರ್ಯ ಮಳಗಿ ಇವರು ಗೌರವ ಸಂಪಾದಕರಾಗಿದ್ದರು. ಪಂ. ವಿದ್ಯಾಧೀಶಾಚಾರ್ಯ ಗುತ್ತಲ ಇವರು ಸಂಪಾದಕರಾಗಿಯೂ, ಶ್ರೀ ಎ ಬಿ ಶ್ಯಾಮಾಚಾರ್ಯ ಇವರು ನಿರ್ವಾಹಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ಪತ್ರಿಕೆಯಲ್ಲಿ ಸತ್ಯಾತ್ಮವಾಣಿ, ನುಡಿಮುತ್ತು, ಶ್ರೀರಾಮನ ಕಥಾಸಾರ, ಮಹಿಳೆಯ ಮಹಾಧರ್ಮಗಳ ಬಗ್ಗೆ, ಕ್ಷೇತ್ರ ದರ್ಶನ, ಪದಬಂಧ, ಮಾಸ ಪಂಚಾಂಗ ಮೊದಲಾದ ಬರಹಗಳಿವೆ.
ಜುಲೈ ೨೦೦೭ರಲ್ಲಿ ಪತ್ರಿಕೆಯ ಬಿಡಿಪ್ರತಿಯ ಬೆಲೆ ರೂ.೧೦.೦೦ ಆಗಿದ್ದು, ವಾರ್ಷಿಕ ಚಂದಾ ೭೫.೦೦ ರೂ ಆಗಿತ್ತು. ಪತ್ರಿಕೆಯನ್ನು ಗೋವಿಂದಮೂರ್ತಿ ದೇಸಾಯಿ ಅವರು ಜಯಸತ್ಯ ಪ್ರಮೋದ ನಿಧಿ ಟ್ರಸ್ಟ್ ಪರವಾಗಿ ಬೆಂಗಳೂರಿನ ವಗರ್ಥ ಮುದ್ರಣಾಲಯದಲ್ಲಿ ಮುದ್ರಿಸಿ, ಬಿಡುಗಡೆ ಮಾಡುತ್ತಿದ್ದರು. ಬೆಂಗಳೂರಿನ ಬಸವನಗುಡಿಯ ಉತ್ತರಾದಿಮಠದಲ್ಲಿ 'ಶ್ರೀಸುಧಾ' ಪತ್ರಿಕೆಯ ಕಾರ್ಯಾಲಯವಿತ್ತು.