ಕನ್ನಡ ಪತ್ರಿಕಾ ಲೋಕ (ಭಾಗ ೬೪) - ರಂಗವಿಠಲ

ಕನ್ನಡ ಪತ್ರಿಕಾ ಲೋಕ (ಭಾಗ ೬೪) - ರಂಗವಿಠಲ

ಶ್ರೀ ಶ್ರೀಪಾದರಾಜರ ಭಕ್ತಿಸಾಹಿತ್ಯ, ಕನ್ನಡ ದಾಸಸಾಹಿತ್ಯ, ದೇವರನಾಮ ಚಿಂತನೆ ಮತ್ತು ಜ್ಞಾನಸತ್ರಕ್ಕೆ ಮೀಸಲಾದ ಮಾಸಪತ್ರಿಕೆಯೇ ರಂಗವಿಠಲ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜುಲೈ ೨೦೧೫ರದ್ದು. ಆ ಸಮಯ ಪತ್ರಿಕೆಯು ೧೨ನೇ ವರ್ಷದಲ್ಲಿ ಮುನ್ನಡೆಯುತ್ತಿತ್ತು. ತುಷಾರ-ಮಯೂರ ಆಕೃತಿಯ ೫೨ ಪುಟಗಳ ಪತ್ರಿಕೆಯ ಮುಖಪುಟ ವರ್ಣರಂಜಿತವಾಗಿದ್ದು, ಒಳಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿದ್ದವು.

ಪ್ರಾತಃ ಸ್ಮರಣೀಯ ಶ್ರೀ ಶ್ರೀ ವಿಜ್ಞಾನನಿಧಿತೀರ್ಥ ಶ್ರೀಪಾದಂಗಳವರು ಸಂಸ್ಥಾಪನಾ ಪೋಷಕರಾಗಿದ್ದಾರೆ. ಆ ಸಮಯದಲ್ಲಿ ಮುಳಬಾಗಿಲು ಶ್ರೀ ಶ್ರೀಪಾದರಾಜ ಮಠದ ಪೀಠಾಧೀಶರಾಗಿದ್ದ ಪೂಜ್ಯ ೧೦೦೮ ಶ್ರೀ ಶ್ರೀಕೇಶವನಿಧಿತೀರ್ಥ ಶ್ರೀಪಾದಂಗಳವರು ಪೋಷಕರಾಗಿದ್ದರು. ಹೆಚ್ ಬಿ ಲಕ್ಷ್ಮೀನಾರಾಯಣ ಇವರು ಸಂಪಾದಕರಾಗಿಯೂ, ವಿದ್ವಾನ್ ಬೆಮ್ಮತ್ತಿ ವೆಂಕಟೇಶಾಚಾರ್ಯ ಇವರು ಸಹ ಸಂಪಾದಕರಾಗಿಯೂ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಪತ್ರಿಕೆಯನ್ನು ಮುಳಬಾಗಿಲು, ನರಸಿಂಹತೀರ್ಥ ಶ್ರೀ ಶ್ರೀಪಾದರಾಜ ಮಠವು ಪತ್ರಿಕೆಯನ್ನು ಪ್ರಕಾಶಿಸುತ್ತಿದೆ.

ಪತ್ರಿಕೆಯಲ್ಲಿ ಅನುಗ್ರಹ ಸಂದೇಶ, ಕಥೆ, ಶ್ರೀಲಕ್ಷ್ಮೀನರಸಿಂಹ ಪ್ರಾದುರ್ಭಾವ ದಂಡಕ ಅಧ್ಯಯನ, ಶ್ರೀ ಕನಕದಾಸರ ಕೀರ್ತನೆಗಳಲ್ಲಿ ಭಾವಸೂಕ್ಷ್ಮತೆಯ ಪ್ರಜ್ಞೆ, ಶ್ರೀ ಪುರಂದರದಾಸರ ಕೃತಿಗಳಲ್ಲಿ ವೈದ್ಯಕೀಯ ಅಂಶಗಳು ಮೊದಲಾದ ಮಾಹಿತಿಪೂರ್ಣ ಲೇಖನಗಳಿವೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ.೧೦.೦೦ ಆಗಿದ್ದು ವಾರ್ಷಿಕ ಚಂದಾ ರೂ.೧೦೦.೦೦ ಹಾಗೂ ದಶವಾರ್ಷಿಕ ಚಂದಾ ರೂ ೯೦೦.೦೦ ಆಗಿತ್ತು. ಪತ್ರಿಕೆಯು ಬೆಂಗಳೂರಿನ ಶ್ರೀಪಾದರಾಜ ಪ್ರಿಂಟರ್ಸ್ ನಲ್ಲಿ ಮುದ್ರಿತಗೊಂಡು ಮಾರುಕಟ್ಟೆಗೆ ಹಾಗೂ ಚಂದಾದಾರರಿಗೆ ತಲುಪುತ್ತಿತ್ತು. ಪತ್ರಿಕೆಯು ಈಗಲೂ ಮುದ್ರಣವಾಗುತ್ತಿದೆಯೇ ಎನ್ನುವ ಬಗ್ಗೆ ಯಾವುದೇ ಮಾಹಿತಿಗಳು ದೊರಕುತ್ತಿಲ್ಲ.