ಕನ್ನಡ ಪತ್ರಿಕಾ ಲೋಕ (ಭಾಗ ೬೬) - ಶ್ರೀ ತ್ರಿಕಣ್ಣೇಶ್ವರೀವಾಣಿ

ಕನ್ನಡ ಪತ್ರಿಕಾ ಲೋಕ (ಭಾಗ ೬೬) - ಶ್ರೀ ತ್ರಿಕಣ್ಣೇಶ್ವರೀವಾಣಿ

ವಿಜ್ಞಾನ -ಸ್ವಾಸ್ಥ್ಯ-ಸಂಸ್ಕಾರಕ್ಕಾಗಿ ಸಮಸ್ತ ಪರಿವಾರಕ್ಕೆ ಮೀಸಲಾದ ಕನ್ನಡ ಮಾಸ ಪತ್ರಿಕೆ ಶ್ರೀ ತ್ರಿಕಣ್ಣೇಶ್ವರೀವಾಣಿ. ತರಂಗ-ಸುಧಾ ಆಕಾರದ ೪೪ ಪುಟಗಳು. ವರ್ಣರಂಜಿತ ರಕ್ಷಾಪುಟ, ಒಳಪುಟಗಳು ಕಪ್ಪು ಬಿಳುಪು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೨೦೧೭ರ ಸಂಚಿಕೆ.

ಈ ಸಂಚಿಕೆಗೆ ಪಿ.ತೇಜೇಶ್ವರ ರಾವ್ ಅವರು ವ್ಯವಸ್ಥಾಪಕ ಸಂಪಾದಕರು-ಪ್ರಕಾಶಕರಾಗಿಯೂ, ಎಂ ಕೃಷ್ಣ ನಾಯರಿ ಅವರು ಸಹ ಪ್ರಕಾಶಕರಾಗಿಯೂ, ವಿದ್ವಾನ್ ಬಿ. ಗೋಪಾಲಾಚಾರ್ಯ ಇವರು ಸಂಪಾದಕರಾಗಿಯೂ, ಕೆ. ಯಾದವ ರಾವ್ ಅವರು ಪ್ರಸರಣಾಧಿಕಾರಿಯಾಗಿಯೂ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಆನಂದ್ ಪ್ರಿಂಟರ್ಸ್ ಉಡುಪಿ ಇಲ್ಲಿ ಮುದ್ರಿತವಾಗುತ್ತಿತ್ತು. ಪತ್ರಿಕೆಯ ಕಚೇರಿಯು ಉಡುಪಿಯ ಶಾಂಭವಿ ಹೋಟೇಲ್ ಎದುರುಗಡೆ ಇರುವ ಮಹಾಮಾಯಾ ಕಾಂಪ್ಲೆಕ್ಸ್ ನಲ್ಲಿ ಶ್ರೀ ಗಣೇಶ್ ದುರ್ಗಾ ಪಬ್ಲಿಕೇಷನ್ಸ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.

ಪತ್ರಿಕೆಯಲ್ಲಿ ಶ್ರೀ ರಾಮೇಶ್ವರಂ ಬಗ್ಗೆ, ಸಿರಿಧಾನ್ಯಗಳ ಬಗ್ಗೆ, ದೀಪಾವಳಿ, ಗೌಟಿ ಆರ್ಥೈಟಿಸ್, ಸಾವಿನ ನೋವಿನ ಪಾಠ, ಆರೋಗ್ಯಕ್ಕೆ ಸಾಮೂಹಿಕ ಯೋಗ, ದುರಭ್ಯಾಸ ಬಿಟ್ಟವರ ಪಥ್ಯ ಮೊದಲಾದ ಲೇಖನಗಳನ್ನು ಒಳಗೊಂಡಿದ್ದು, ಈ ಲೇಖನಗಳನ್ನು ಅಗರಿ ಭಾಸ್ಕರ್ ರಾವ್, ಪಿ.ವಾಸುದೇವ ರಾವ್, ಬನ್ನಂಜೆ ಬಾಬು ಅಮೀನ್, ಡಾ. ಮುರಳಿ ಮೋಹನ್ ಚೂಂತಾರು, ಗೋಪಾಲಕೃಷ್ಣ ದೇಲಂಪಾಡಿ ಮೊದಲಾದ ಖ್ಯಾತನಾಮರು ಬರೆದಿದ್ದಾರೆ. ತಂಬುಳಿಗಳು ಹಾಗೂ ಮಾಸ ಭವಿಷ್ಯವೂ ಈ ಪತ್ರಿಕೆಯಲ್ಲಿ ಒಳಗೊಂಡಿದೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ಅಂದು ರೂ.೨೫.೦೦ ಇತ್ತು. ವಾರ್ಷಿಕ ಚಂದಾ ರೂ ೩೦೦.೦೦ ಆಗಿತ್ತು. ಪ್ರಸ್ತುತ ಪತ್ರಿಕೆ ಮುದ್ರಿತವಾಗುತ್ತಿದೆಯೇ ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಿಲ್ಲ.