ಕನ್ನಡ ಪತ್ರಿಕಾ ಲೋಕ (ಭಾಗ ೬೮) - ಲೈಫ್ 360

ಕನ್ನಡ ಪತ್ರಿಕಾ ಲೋಕ (ಭಾಗ ೬೮) - ಲೈಫ್ 360

ಭಾವ- ಬಣ್ಣ- ಬದುಕು ಬಗ್ಗೆ 'ಲೈಫ್ 360' ಎಂಬ ಪಾಕ್ಷಿಕ ಪತ್ರಿಕೆ ೨೦೧೩ರಲ್ಲಿ ಪ್ರಾರಂಭವಾಗಿತ್ತು. ಮೊದಲಿಗೆ ಟ್ಯಾಬಲಾಯ್ಡ್ ಆಕಾರದಲ್ಲಿದ್ದ ಈ ಪತ್ರಿಕೆ ಸುಮಾರು ೭ ಸಂಚಿಕೆಗಳ ಬಳಿಕ ಸುಧಾ-ತರಂಗ ಆಕೃತಿಯ ಪುಸ್ತಕದ ರೂಪದಲ್ಲಿ ಹೊರಬರಲಾರಂಭಿಸಿತು. ಯಾವುದೇ ಆಂಗ್ಲ ಪತ್ರಿಕೆಗಳಿಗೆ ಕಡಿಮೆ ಇಲ್ಲದಂತಿದ್ದ ಈ ಪತ್ರಿಕೆಯ ನೋಟ ಹಾಗೂ ಹೂರಣ ಎರಡು ಚೆನ್ನಾಗಿತ್ತು. ಬೆಲೆ ಕೊಂಚ ದುಬಾರಿಯಂತೆ ಕಂಡರೂ ಪತ್ರಿಕೆಗೆ ಬಳಸಿದ ಮುದ್ರಣ ಪೇಪರ್ ಹಾಗೂ ಬಹುವರ್ಣಗಳ ಮುದ್ರಣವು ಮನಸೂರೆಗೊಳ್ಳುತ್ತಿತ್ತು. 

ಖ್ಯಾತ ಪತ್ರಕರ್ತರಾದ ಬಿ ಗಣಪತಿ ಈ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. ಗಿರೀಶ್ ಕೆ ಎಚ್ ಪ್ರಕಾಶಕರಾಗಿ, ಬಸವರಾಜ್ ಕೆ ಜಿ ಮುಖ್ಯ ಉಪಸಂಪಾದಕರಾಗಿ, ದೇಶಾದ್ರಿ ಎಚ್ ಮುಖ್ಯ ವರದಿಗಾರರಾಗಿ, ಅಶ್ವಿನಿ ಎಚ್ ಆರ್, ಅಶ್ವಿನಿ ತೋನ್ಸೆ, ಪಾವನಾ ಹೆಗಡೆ ಉಪಸಂಪಾದಕರಾಗಿ, ಆದರ್ಶ್ ಎಂ ದಾಸ್ ಮುಖ್ಯ ವಿನ್ಯಾಸಗಾರರಾಗಿ, ಪ್ರಭಾಕರ್ ವಿನ್ಯಾಸಗಾರರಾಗಿ, ಗುರುಪ್ರಸಾದ್ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಲೈಫ್ 360 ಪತ್ರಿಕೆಯು ಬೆಂಗಳೂರಿನ ರಾಜಹನ್ಸ್ ಎಂಟರ್ ಪ್ರೈಸರ್ ಮುದ್ರಣಾಲಯದಲ್ಲಿ ಮುದ್ರಿತವಾಗಿ ಹೊರಬರುತ್ತಿತ್ತು. 360 ಡಿಗ್ರಿ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿ. ಎಂಬ ಸಂಸ್ಥೆಯು ಇದರ ಪ್ರಕಾಶನದ ಜವಾಬ್ದಾರಿಯನ್ನು ನಿಭಾಯಿಸುತ್ತಿತ್ತು.

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ಮಾರ್ಚ್ ೧, ೨೦೧೪ರ ಸಂಚಿಕೆಯಾಗಿದೆ. ಪತ್ರಿಕೆಯ ಪ್ರಸಾರ ಹೆಚ್ಚಿಸಲು ಮುಖಬೆಲೆಯಲ್ಲಿ ವಿಶೇಷ ರಿಯಾಯತಿ ಹಾಗೂ ಪುಸ್ತಕದೊಡನೆ ಹಾಡುಗಳ ಸಿಡಿ, ಶ್ಯಾಂಪೂ ಉಚಿತವಾಗಿ ನೀಡುತ್ತಿದ್ದರು. ಕೆಲವು ಸಮಯಗಳ ಕಾಲ ರೂ ೫೦.೦೦ ಮುಖ ಬೆಲೆಯ ಪತ್ರಿಕೆಯು ೨೯ರೂ. ಗೆ ದೊರಕುತ್ತಿತ್ತು.  

ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳು, ಕರ್ನಾಟಕ ದರ್ಶನ, ಶೈಕ್ಷಣಿಕ, ಪಾಕ, ಸಿನೆಮಾ, ಗ್ಲಾಮರ್, ಆರೋಗ್ಯ ಸಂಬಂಧಿ ಲೇಖನಗಳು ಪ್ರಕಟವಾಗುತ್ತಿದ್ದವು. ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಇವರ ಆತ್ಮಕಥನವು ಧಾರವಾಹಿ ರೂಪದಲ್ಲಿ ಮೂಡಿ ಬರುತ್ತಿತ್ತು. ಪತ್ರಿಕೆಗೆ ಎಸ್ ಎಸ್ ಬಾದಾಮಿ, ವೀಣಾ ಬನ್ನಂಜೆ, ವಿಶ್ವೇಶ್ವರ ಭಟ್ಟ, ಶಶಿಕಾಂತ ಯಡಹಳ್ಳಿ, ಸುನಂದಾ ಕಡಮೆ, ಶ್ಯಾಮಸುಂದರ್ ಕುಲಕರ್ಣಿ ಮೊದಲಾದ ಖ್ಯಾತನಾಮರು ಲೇಖನಗಳನ್ನು ಬರೆಯುತ್ತಿದ್ದರು.

ಪತ್ರಿಕೆಯು ೧೧೬ ಪುಟಗಳೊಂದಿಗೆ ಕಲರ್ ಫುಲ್ ಆಗಿ ಮೂಡಿ ಬರುತ್ತಿತ್ತು. ಬಹಳಷ್ಟು ಜಾಹೀರಾತು ಇರುತ್ತಿತ್ತು. ಬಿಡಿ ಪ್ರತಿ ಬೆಲೆ ೫೦ ರೂ ಆಗಿದ್ದರೂ, ಪ್ರಾರಂಭಿಕ ರಿಯಾಯತಿ ದರ ೨೯.೦೦ ಆಗಿತ್ತು. ವಾರ್ಷಿಕ ಚಂದಾ ರೂ ೬೦೦.೦೦ ಆಗಿತ್ತು. ಚಂದಾದಾರರಾದವರಿಗೆ ಟೀ ಶರ್ಟ್, ಸೋಲಾರ್ ಲ್ಯಾಂಪ್, ಜ್ಯಾಕೆಟ್ ಮೊದಲಾದ ಉಡುಗೊರೆಗಳನ್ನು ನೀಡಲಾಗುತ್ತಿತ್ತು. ಒಂದೆರಡು ವರ್ಷ ಪ್ರಕಟವಾದ ಪತ್ರಿಕೆ ನಂತರದ ದಿನಗಳಲ್ಲಿ ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿತು.