ಕನ್ನಡ ಪತ್ರಿಕಾ ಲೋಕ (ಭಾಗ -೬೯) ನೂತನ
ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಇವರು 'ವಿಜಯ ಕರ್ನಾಟಕ' ದಿನ ಪತ್ರಿಕೆಯನ್ನು ಪ್ರಾರಂಭಿಸುವ ಸಮಯದಲ್ಲಿ ಇನ್ನೆರಡು ಪತ್ರಿಕೆಗಳನ್ನು ಹುಟ್ಟುಹಾಕಿದ್ದರು. ಒಂದು 'ನೂತನ' ಎಂಬ ವಾರ ಪತ್ರಿಕೆ, ಮತ್ತೊಂದು 'ಭಾವನಾ' ಎಂಬ ಮಾಸ ಪತ್ರಿಕೆ. ನೂತನ ಪತ್ರಿಕೆಯು ಸುಧಾ-ತರಂಗ ಆಕಾರದ ಪತ್ರಿಕೆಯಾಗಿದ್ದು, ಅವರೇ ಹೇಳಿಕೊಳ್ಳುವಂತೆ ಸದಭಿರುಚಿಯ ಸಾಪ್ತಾಹಿಕವಾಗಿತ್ತು. ೨೦೦೦ ನೇ ಇಸವಿಯ ಆದಿ ಭಾಗದಲ್ಲಿ ಪ್ರಕಟಣೆಯನ್ನು ಪ್ರಾರಂಭಿಸಿದ ಪತ್ರಿಕೆಯು ಸುಮಾರು ಎರಡು ವರ್ಷಗಳ ಕಾಲ ಪ್ರಕಟವಾಗಿ ನಂತರ ನಷ್ಟದ ಕಾರಣ ನೀಡಿ ಪ್ರಕಾಶಕರು ಮುದ್ರಣವನ್ನು ಸ್ಥಗಿತಗೊಳಿಸಿದರು.
ನಮ್ಮ ಸಂಗ್ರಹದಲ್ಲಿ ಇರುವ ಪತ್ರಿಕೆ ಆಗಸ್ಟ್ ೬, ೨೦೦೦ ನೇ ಸಂಚಿಕೆ. ಇದು ಮೊದಲನೇ ವರ್ಷದ ೨೯ನೇ ಸಂಚಿಕೆಯಾಗಿದೆ. ಪತ್ರಿಕೆಯ ಪ್ರಾರಂಭದಲ್ಲಿ ಪ್ರಧಾನ ಸಂಪಾದಕರಾಗಿದ್ದವರು 'ತರಂಗ' ಪತ್ರಿಕೆಯ ಸಂಪಾದಕರಾಗಿದ್ದ ಸಂತೋಷಕುಮಾರ ಗುಲ್ವಾಡಿ ಇವರು. ಶಾ ಮಂ ಕೃಷ್ಣರಾಯ ಇವರು ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಸತ್ಯಸಿಂಹ ಅವರ ವಿನ್ಯಾಸದಲ್ಲಿ ಸೊಗಸಾಗಿ ಮೂಡಿ ಬರುತ್ತಿತ್ತು. ಪ್ರಾರಂಭದಲ್ಲಿ ೮೦ ಪುಟಗಳ ಪತ್ರಿಕೆಯ ಮುಖಬೆಲೆ ರೂ೭.೦೦ ಆಗಿತ್ತು. ಈ ಪತ್ರಿಕೆಯಲ್ಲಿ ವರ್ಣರಂಜಿತ ಪುಟಗಳೊಂದಿಗೆ ಕಪ್ಪು ಬಿಳುಪಿನ ಪುಟಗಳೂ ಇದ್ದವು. ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದ ಪತ್ರಿಕೆಯ ಸಂಪಾದಕೀಯ ಕಾರ್ಯಾಲಯವು ಬೆಂಗಳೂರಿನ ವೈಯಾಲಿಕಾವಲ್ ಇಲ್ಲಿತ್ತು. ವಿಜಯ ಸಂಕೇಶ್ವರ ಇವರು ಪ್ರಕಾಶಕರಾಗಿದ್ದು, ಅವರ ಆನಂದ್ ಪ್ರಿಂಟರ್ಸ್ ಆಂಡ್ ಪಬ್ಲಿಷರ್ಸ್ ಸಂಸ್ಥೆಯಿಂದ ಪ್ರಕಾಶಿತವಾಗಿ ಮಾರುಕಟ್ಟೆಗೆ ಬರುತ್ತಿತ್ತು.
ಪ್ರಧಾನ ಸಂಪಾದಕರಾದ ಸಂತೋಷಕುಮಾರ ಗುಲ್ವಾಡಿ ಇವರು ತಮಗೆ ಹೆಸರು ತಂದುಕೊಟ್ಟ ಅಂಕಣ 'ಅಂತರಂಗ-ಬಹಿರಂಗ' ವನ್ನು ಬರೆಯುತ್ತಿದ್ದರು. ಇವರ ಜೊತೆ ಶ್ರೀಧರ ದೀಕ್ಷಿತ್, ಕೆ. ಗಣೇಶ್ ಕೋಡೂರು, ನರೇಂದ್ರ ರೈ ದೇರ್ಲ, ಎಚ್ಚೆಸ್ಕೆ, ಎಚ್ ದುಂಡಿರಾಜ್, ಅನಂತ ಕಲ್ಲೋಳ, ಸ್ವಾಮಿ ರಾಮಕೃಷ್ಣಾರ್ಪಣಾನಂದ, ನೇಮಿಚಂದ್ರ, ಡಾ. ವಸುಂಧರಾ ಭೂಪತಿ ಮೊದಲಾದ ಖ್ಯಾತನಾಮರು ಲೇಖನಗಳನ್ನು ಬರೆಯುತ್ತಿದ್ದರು. ಪ್ರಾರಂಭದಲ್ಲಿ ಟಿ ಸುನಂದಮ್ಮ ಅವರು ನಿರ್ವಹಿಸುತ್ತಿದ್ದ ಪ್ರಶ್ನೋತ್ತರ ಅಂಕಣವನ್ನು ಮುಂದಿನ ದಿನಗಗಳಲ್ಲಿ ಮಾಸ್ಟರ್ ಹಿರಣ್ಣಯ್ಯನವರು ಮುಂದುವರೆಸಿಕೊಂಡು ಬಂದರು. ಕ್ರೀಡೆ, ಸಿನೆಮಾ, ಪ್ರವಾಸ, ಆರೋಗ್ಯ ಸಂಬಂಧಿ ಬರಹಗಳು ಇದರಲ್ಲಿ ಅಡಕವಾಗಿದ್ದವು.
ಬದಲಾದ ಪರಿಸ್ಥಿತಿಯಲ್ಲಿ ಸಂತೋಷಕುಮಾರ ಗುಲ್ವಾಡಿಯವರು ಇದರ ಸಂಪಾದಕ ಹುದ್ದೆಯಿಂದ ಕೆಳಗಿಳಿಯಬೇಕಾಗಿ ಬಂದು ಡಿ. ಮಹದೇವಪ್ಪ ಇವರು ಸಂಪಾದಕ ಹುದ್ದೆಯನ್ನು ನಿರ್ವಹಿಸಿದರು. ಪತ್ರಿಕೆಯ ಬೆಲೆ ಇಳಿಕೆಯ ಸಮರದಿಂದ ಇದರ ಬೆಲೆಯನ್ನು ೭.೦೦ ರೂ ನಿಂದ ೫.೦೦ ರೂ. ಗೆ ಇಳಿಸಲಾಯಿತು. ಪತ್ರಿಕೆಯ ಪುಟಗಳ ಸಂಖ್ಯೆ ೮೦ ರಿಂದ ೬೬ ಕ್ಕೆ ಇಳಿಕೆಯಾಯಿತು. ಆದರೂ ಪ್ರಸಾರ ಸಂಖ್ಯೆಯಲ್ಲಿ ಏರಿಕೆ ಕಾಣದೇ ಬಹುಷಃ ೨೦೦೧ರ ಮಧ್ಯ ಭಾಗದಲ್ಲಿ ಪತ್ರಿಕೆಯು ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿತು.