ಕನ್ನಡ ಪತ್ರಿಕಾ ಲೋಕ (ಭಾಗ ೭೦) - ನಿಮ್ಮೆಲ್ಲರ ಮಾನಸ

ಕನ್ನಡ ಪತ್ರಿಕಾ ಲೋಕ (ಭಾಗ ೭೦) - ನಿಮ್ಮೆಲ್ಲರ ಮಾನಸ

ಯುವ ಮನಸ್ಸುಗಳನ್ನು ಗೆದ್ದ ಪತ್ರಿಕೆ 'ನಿಮ್ಮೆಲ್ಲರ ಮಾನಸ'. ಪತ್ರಕರ್ತ, ಲೇಖಕ ಕೆ.ಗಣೇಶ್ ಕೋಡೂರು ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಪತ್ರಿಕೆ ಬಹಳಷ್ಟು ಯುವ ಓದುಗರ ಮನಸ್ಸು ಗೆದ್ದಿತ್ತು. ಪತ್ರಿಕೆಯ ಪ್ರಾರಂಭದ ದಿನಗಳಲ್ಲಿ ಗಣೇಶ್ ಅವರೇ ಪ್ರಕಾಶಕರಾಗಿದ್ದರು. ನಂತರ ಅವರು ತಮ್ಮ ಪತ್ರಿಕೆಯನ್ನು ಡೆಲ್ಲಿ ಪ್ರಕಾಶನ ವಿತರಣ್ ಸಂಸ್ಥೆಯವರಿಗೆ ಮಾರಾಟ ಮಾಡಿದರು. ಇದರಿಂದ ಪತ್ರಿಕೆಯು ವರ್ಣರಂಜಿತವಾಗಿ ಮುದ್ರಿತವಾಗಿ ಹೊರಬರಲು ಪ್ರಾರಂಭಿಸಿತ್ತು. ಸಂಪಾದಕರಾಗಿ ಗಣೇಶ್ ಕೋಡೂರು ಅವರೇ ಮುಂದುವರೆದಿದ್ದರು.

೨೦೦೭-೦೮ರ ಸುಮಾರಿಗೆ 'ಮಾನಸ' ಆರಂಭವಾಗಿರಬೇಕು. 'ಮನಸುಗಳ ಕನ್ನಡಿಯಲ್ಲಿ ಅಕ್ಷರಗಳ ಪ್ರತಿಬಿಂಬ' ಎಂಬ ಅಡಿಬರಹದೊಂದಿಗೆ ಹೊರ ಬರುತ್ತಿದ್ದ ಪತ್ರಿಕೆ ಯುವಕ/ಯುವತಿಯರಿಗೆ ಅಚ್ಚುಮೆಚ್ಚಾಗಿತ್ತು. ಸುಧಾ/ತರಂಗ ಆಕೃತಿಯಲ್ಲಿ  ೬೦ ಪುಟಗಳು. ಡೆಲ್ಲಿ ಪ್ರೆಸ್ ಪರವಾಗಿ ಪರೇಶ್ ನಾಥ್ ಅವರು ಸಂಪಾದಕೀಯ ಅಧ್ಯಕ್ಷರಾಗಿಯೂ, ಹೆಚ್. ಎಂ. ಶಂಕರ್ ಅವರು ಪ್ರಕಾಶಕ-ಮುದ್ರಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಮುಖಪುಟ ಹಾಗೂ ವಿನ್ಯಾಸವನ್ನು ಆವಿ ಡಿಸೈನ್ ಡೆಸ್ಕ್ ಹಾಗೂ ಸತೀಶ್ ಕುಮಾರ್ ನಿರ್ವಹಿಸುತ್ತಿದ್ದರು. ಬೆಂಗಳೂರಿನ ಶಿವಾಜಿನಗರದಲ್ಲಿ ಸಂಪಾದಕೀಯ ಕಾರ್ಯಾಲಯವಿದ್ದು, ಹರಿಯಾಣಾದ ಪಿ ಎಸ್ ಪಿ ಸಿ ಪ್ರೆಸ್ ನಲ್ಲಿ ಮುದ್ರಣವಾಗಿ ಮಾರುಕಟ್ಟೆಗೆ ಬರುತ್ತಿತ್ತು.

ರವಿ ಬೆಳಗೆರೆ ಸಾರಥ್ಯದ 'ಓ ಮನಸೇ...' ಹಾಗೂ 'ನಿಮ್ಮೆಲ್ಲರ ಮಾನಸ' ಪತ್ರಿಕೆಗಳಿಗೆ ಆರೋಗ್ಯಕರ ಪೈಪೋಟಿ ಮಾರುಕಟ್ಟೆಯಲ್ಲಿತ್ತು. ಮಾನಸದ ಮುಖಪುಟ ಲೇಖನವನ್ನು ಸಂಪಾದಕರಾದ ಗಣೇಶ್ ಕೋಡೂರು ಅವರೇ ಹೆಚ್ಚಾಗಿ ಬರೆಯುತ್ತಿದ್ದರು. ಖ್ಯಾತ ಸಾಹಿತಿ ಕೆ ಟಿ ಗಟ್ಟಿ ಅವರ ಧಾರವಾಹಿಯೊಂದು ಈ ಪತ್ರಿಕೆಯಲ್ಲಿ ಮೂಡಿ ಬರುತ್ತಿತ್ತು. ಪತ್ರಿಕೆಯ ಮಾರಾಟಕ್ಕಾಗಿ ಪದಬಂಧ ಬಹುಮಾನ ಯೋಜನೆಗಳನ್ನು ಆಯೋಜಿಸಿದ್ದರು. ಬಹುಮಾನಿತರಿಗೆ ಪುಸ್ತಕವು ಉಡುಗೊರೆಯಾಗಿ ಸಿಗುತ್ತಿತ್ತು. ಮಾರ್ಚ್ ೨೦೨೦ರಲ್ಲಿ ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ.೨೫.೦೦ ಆಗಿದ್ದು, ರಿಯಾಯಿತಿ ದರದ ಚಂದಾ ವರ್ಷಕ್ಕೆ ಕೇವಲ ೧೫೦.೦೦ ರೂ. ಆಗಿತ್ತು. 

ಓದುಗರ ಪ್ರಶ್ನೆಗಳಿಗೆ ಸ್ವತಃ ಗಣೇಶ್ ಕೋಡೂರು ಅವರೇ ಸಮಂಜಸವಾಗಿ ಉತ್ತರವನ್ನು 'ನನ್ನ ನಿಮ್ಮ ನಡುವೆ' ಎಂಬ ಅಂಕಣದ ಮೂಲಕ ನೀಡುತ್ತಿದ್ದರು. ಹಲವಾರು ಯುವ ಲೇಖಕರ ಬರಹಗಳು ಮಾನಸದಲ್ಲಿ ಬೆಳಕು ಕಾಣುತ್ತಿದ್ದವು. ಮಾನಸ ಕ್ಲಬ್ ಸಹ ಪ್ರಾರಂಭಿಸಲಾಗಿತ್ತು. ಪುಟಗಳ ನಡುವೆ 'ಮನದ ಮೆಸೇಜ್' ಹಾಗೂ 'ಕಾಮಿಡಿ ಕಿಕ್' ಗಳು ಮನಸ್ಸಿಗೆ ಮುದ ನೀಡುತ್ತಿದ್ದುವು. ೨೦೨೦ರ ಮಾರ್ಚ್ ನಲ್ಲಿ ಕೋವಿಡ್ ಸಂಕಷ್ಟ ಪ್ರಾರಂಭವಾದ ಬಳಿಕ ಮುಚ್ಚಿಹೋದ ಹಲವಾರು ಪತ್ರಿಕೆಗಳ ಪೈಕಿ 'ಮಾನಸ' ವೂ ಒಂದು. ಮಾರ್ಚ್ ೨೦೨೦ ಮಾನಸದ ಕೊನೆಯ ಸಂಚಿಕೆಯಾಗಿದೆ. ಭವಿಷ್ಯದಲ್ಲಿ ಮತ್ತೊಮ್ಮೆ ಈ ಪತ್ರಿಕೆ ಹೊರ ಬರಲಿ ಎಂದು ಬಹುತೇಕ ಓದುಗರ ಆಶಯ.