ಕನ್ನಡ ಪತ್ರಿಕಾ ಲೋಕ (ಭಾಗ ೭೧) - ಪರಶು ಓದುಗರ ಆಯುಧ

ಕನ್ನಡ ಪತ್ರಿಕಾ ಲೋಕ (ಭಾಗ ೭೧) - ಪರಶು ಓದುಗರ ಆಯುಧ

'ಪರಶು' ಓದುಗರ ಆಯುಧ ಎಂಬ ಟ್ಯಾಬಲಾಯ್ಡ್ ವಾರ ಪತ್ರಿಕೆ ಪರಶುರಾಮ ಅವರ ಸಾರಥ್ಯದಲ್ಲಿ ಹೊರಬರುತ್ತಿತ್ತು. ೨೦೧೧-೧೨ರಲ್ಲಿ ತನ್ನ ಪ್ರಕಟನೆಯನ್ನು ಪ್ರಾರಂಭಿಸಿದ 'ಪರಶು' ವಾರ ಪತ್ರಿಕೆಯ ಶೀರ್ಷಿಕೆ ನೋಂದಣಿಯಾದದ್ದು 'ಪರಶು ಓದುಗರ ಆಯುಧ' ಎಂಬ ಹೆಸರಿನಲ್ಲಿ. ಆದರೆ ಪತ್ರಿಕೆಯಲ್ಲಿ 'ಪರಶು' ಎಂಬ ಹೆಸರನ್ನು ದೊಡ್ಡದಾಗಿಸಿ, ಅದರ ಕೆಳಗಡೆ ಪುಟ್ಟದಾಗಿ ಓದುಗರ ಆಯುಧ ಎಂದು ಮುದ್ರಿಸಲಾಗುತ್ತಿತ್ತು. 

ಪತ್ರಿಕೆಯಲ್ಲಿ ಕ್ರೈಂ, ರಾಜಕೀಯ, ಚಲನ ಚಿತ್ರ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ಇತ್ತು. ನಮ್ಮ ಸಂಗ್ರಹದಲ್ಲಿರುವ ಸಂಚಿಕೆ ಅಕ್ಟೋಬರ್ ೫, ೨೦೧೫ರ ೧೯೩ನೇ ಸಂಚಿಕೆ. ಈ ಸಂಚಿಕೆಯ ಬೆಲೆ ರೂ ೧೦.೦೦ ಆಗಿತ್ತು. ಟ್ಯಾಬಲಾಯ್ಡ್ ಗಾತ್ರದ ೧೬ ಪುಟಗಳು (೪ ವರ್ಣಪುಟಗಳು ಮತ್ತು ೧೨ ಕಪ್ಪು ಬಿಳುಪು). ಪತ್ರಿಕೆಯ ಕಚೇರಿ ಬೆಂಗಳೂರಿನ ವಿಜಯನಗರದಲ್ಲಿತ್ತು. ಬೆಂಗಳೂರಿನ ಲಾವಣ್ಯ ಮುದ್ರಣಾಲಯದಲ್ಲಿ ಮುದ್ರಿತಗೊಂಡು ಪ್ರತೀ ಸೋಮವಾರ ಮಾರುಕಟ್ಟೆಗೆ ಬರುತ್ತಿತ್ತು. 

ಸಂಪಾದಕರಾದ ಪರಶುರಾಮ್ ಅವರು ಪಿ ರಾಮ್ ಎಂಬ ಹೆಸರಿನಲ್ಲಿ 'ಓಪನ್ ಟಾಕ್ ' ಎಂಬ ಹೆಸರಿನ ಸಂಪಾದಕೀಯವನ್ನು ಬರೆಯುತ್ತಿದ್ದರು. ಅದರ ಜೊತೆ 'ನವಿಲು ಗರಿ' ಎಂಬ ಅಂಕಣವನ್ನೂ ಬರೆಯುತ್ತಿದ್ದರು. ಪತ್ರಿಕೆಗೆ  ವರದಿಗಳನ್ನು ರಾಘವ, ಪ್ರಥ್ವಿ, ಕೆ ಎ ಚಂದ್ರಜ್ಯೋತಿ, ನವೀನ್, ಎಸ್ಸೆನ್ ಮೊದಲಾದವರು ಬರೆಯುತ್ತಿದ್ದರು. ವರದಿಗಾರರ ಹೆಸರುಗಳನ್ನು ಗಮನಿಸುವಾಗ ಹಲವಾರು ವರದಿಗಳನ್ನು ಸಂಪಾದಕರೇ ಬೇರೆ ಬೇರೆ ಹೆಸರಿನಲ್ಲಿ ಬರೆಯುತ್ತಿದ್ದರು ಎಂಬ ಗುಮಾನಿ ಹುಟ್ಟಿಕೊಳ್ಳುತ್ತದೆ. ಪತ್ರಿಕೆಯಲ್ಲಿ ಉದ್ಯೋಗ ವಾರ್ತೆ, ಆರೋಗ್ಯ ಸಂಬಂಧಿ ಲೇಖನಗಳು ಇರುತ್ತಿದ್ದವು. ಪತ್ರಿಕೆಯು ಈಗಲೂ ಮುದ್ರಣವಾಗುತ್ತಿದೆಯೇ ಎನ್ನುವ ಬಗ್ಗೆ ಮಾಹಿತಿಗಳು ಸಿಗುತ್ತಿಲ್ಲ.