ಕನ್ನಡ ಪತ್ರಿಕಾ ಲೋಕ (ಭಾಗ ೭೩) - ಬಂಟರ ರಂಗ

ಕನ್ನಡ ಪತ್ರಿಕಾ ಲೋಕ (ಭಾಗ ೭೩) - ಬಂಟರ ರಂಗ

ಬಂಬ್ರಾಣ ಸುದೇಶ್ ರೈ ಇವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಮಾಸ ಪತ್ರಿಕೆ 'ಬಂಟರ ರಂಗ'. ಹೆಸರೇ ಹೇಳುವಂತೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ, ಮುಂಬಯಿಯಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಬಂಟ ಜನಾಂಗ, ಕಾರ್ಯಕ್ರಮಗಳು ಹಾಗೂ ಬಂಟರಲ್ಲಿ ಯಶಸ್ಸಿನ ಶಿಖರಕ್ಕೆ ಏರಿದ ಸಾಧಕರ ಬಗ್ಗೆ ಮಾಹಿತಿ ನೀಡುವ ಪತ್ರಿಕೆ ಇದು. ಇದು ಬಂಟರ ಮುಖವಾಣಿ ಎಂದು 'ಬಂಟರ ರಂಗ' ಕ್ಕೆ ಅಡಿ ಬರಹ ನೀಡಿದ್ದಾರೆ.

ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು. ಮುಖಪುಟ ಹಾಗೂ ಹಿಂದಿನ ಪುಟ ವರ್ಣ ರಂಜಿತ, ಒಳಪುಟಗಳು ಕಪ್ಪು ಬಿಳುಪು. ೨೦೧೨ಕ್ಕೆ ಮೊದಲೇ ಬಂಟರ ರಂಗ ಪ್ರಕಟಣೆಯನ್ನು ಆರಂಭ ಮಾಡಿದ್ದರೂ, ಅಧಿಕೃತವಾಗಿ ದಾಖಲಾತಿ ಮೂಲಕ ಆರ್ ಎನ್ ಐ ನಲ್ಲಿ ನೋಂದಾಯಿಸಲ್ಪಟ್ಟು ಪ್ರಾರಂಭವಾದದ್ದು ೨೦೧೨ನೇ ಇಸವಿಯಲ್ಲಿ. ನಮ್ಮ ಸಂಗ್ರಹದಲ್ಲಿರುವ ಸಂಚಿಕೆ ಜೂನ್ ೨೦೧೩ರ ಪತ್ರಿಕೆ.

ಪತ್ರಿಕೆಯು ಬಹುತೇಕವಾಗಿ ಬಂಟರಲ್ಲಿ ಯಶಸ್ಸು ಸಾಧಿಸಿದ ಉದ್ಯಮಿಗಳು, ಸೇನೆಯಲ್ಲಿ ಸೇವೆ ಸಲ್ಲಿಸಿದ/ಸಲ್ಲಿಸುತ್ತಿರುವ ವ್ಯಕ್ತಿಗಳ ಬಗ್ಗೆ, ಬಂಟರ ಯುವ ಸಾಧಕರ ಬಗ್ಗೆ ಮಾಹಿತಿ ನೀಡುತ್ತದೆ. ಇದರ ಜೊತೆಗೆ ಪತ್ರಿಕೆಯಲ್ಲಿ ಬಂಟ ಸಮುದಾಯದ ಕೆಲವು ಪ್ರಮುಖ ಸಂಗತಿಗಳು, ಊರಿನ ಹಾಗೂ ಪರ ಊರಿನ ಮಹತ್ವದ ವಿಚಾರಗಳು ಹಾಗೂ ಆರೋಗ್ಯ ಸಂಬಂಧಿ ಲೇಖನಗಳನ್ನು ಪ್ರಕಟಿಸಲಾಗುತ್ತದೆ.

ಕೆಲವು ಬಾರಿ ಪತ್ರಿಕೆಯು ಎರಡು ತಿಂಗಳಿಗೊಮ್ಮೆ ಹೊರಬರುತ್ತದೆ. ಪತ್ರಿಕೆಯಲ್ಲಿ ಮುಂಬಯಿಯಲ್ಲಿ ನೆಲೆಗೊಂಡ ಬಂಟರು ಹಾಗೂ ಅಲ್ಲಿ ತುಳು ಕೂಟಗಳಲ್ಲಿ ನಡೆಯುವ ಕಾರ್ಯಕ್ರಮಗಳ ವರದಿಯನ್ನೂ ಪ್ರಕಟಿಸಲಾಗುತ್ತದೆ. ಪತ್ರಿಕೆಯ ಬಿಡಿಪ್ರತಿಯ ಬೆಲೆ ರೂ.೧೦.೦೦ ಆಗಿದೆ. ಪತ್ರಿಕೆಯ ಕಚೇರಿಯು ಮಂಗಳೂರಿನ ವಾಮಂಜೂರಿನಲ್ಲಿದ್ದು, ಅಳಕೆಯ ಪ್ರಿಂಟ್ ಡಿಸೈನ್ಸ್ ಇಲ್ಲಿ ಪುಟ ವಿನ್ಯಾಸಗೊಂಡು, ಯೆಯ್ಯಾಡಿಯ ದಿಗಂತ ಮುದ್ರಣಾಲಯದಲ್ಲಿ ಮುದ್ರಿತವಾಗುತ್ತಿದೆ.