ಕನ್ನಡ ಪತ್ರಿಕಾ ಲೋಕ (ಭಾಗ ೭೪) - ಕನ್ನಡ ಮಾಣಿಕ್ಯ
ಕಳೆದ ಏಳು ವರ್ಷಗಳಿಂದ ಪ್ರಕಟವಾಗುತ್ತಿರುವ ಪತ್ರಿಕೆ 'ಕನ್ನಡ ಮಾಣಿಕ್ಯ' ವೀರಕಪುತ್ರ ಶ್ರೀನಿವಾಸ ಅವರ ಉಸ್ತುವಾರಿಯಲ್ಲಿ ಎಂ ಎಲ್ ಪ್ರಸನ್ನ ಅವರ ಪ್ರಧಾನ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಕಲರ್ ಫುಲ್ ಪತ್ರಿಕೆ ಇದು. ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಹಾಗೂ ನವೀನ್ ಸಾಗರ್ ಅವರು ಈ ಪತ್ರಿಕೆಯ ಗೌರವ ಸಂಪಾದಕರಾಗಿದ್ದಾರೆ. ಡಾ. ವಿಷ್ಣು ಸೇನಾ ಸಮಿತಿಯ ಸಹಯೋಗದಿಂದ ಹೊರಬರುತ್ತಿರುವ ಪತ್ರಿಕೆಯು ವೀರಲೋಕ ಪ್ರತಿಷ್ಟಾನದ ಆಡಳಿತಕ್ಕೆ ಒಳಪಟ್ಟಿದೆ.
ಸುಧಾ/ತರಂಗ ಪತ್ರಿಕೆಯ ಆಕಾರದ ೫೨ + ೪ ಪುಟಗಳು. ಎಲ್ಲಾ ಪುಟಗಳು ವರ್ಣರಂಜಿತವಾಗಿದ್ದು, ಸೊಗಸಾದ ನುಣುಪಾದ ಹಾಳೆಗಳನ್ನು ಬಳಸಿ ಮುದ್ರಿಸಲಾಗಿದೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜೂನ್ ೨೦೨೨ ರ ಸಂಚಿಕೆಯಾಗಿದ್ದು ಇದು ಪತ್ರಿಕೆಯ ಎಂಟನೇ ವರ್ಷದ ಮೊದಲ ಪ್ರತಿಯಾಗಿದೆ. ಈ ಸಂಚಿಕೆಯಲ್ಲಿ ಪ್ರಧಾನ ಸಂಪಾದಕರಾದ ಎಂ ಎಲ್ ಪ್ರಸನ್ನ ಅವರು ಪತ್ರಿಕೆಯು ಸಾಗಿ ಬಂದ ಹಾದಿಯನ್ನು ವಿಶ್ಲೇಷಿಸಿದ್ದಾರೆ.
ಪತ್ರಿಕೆಯ ಲೇಖನಗಳಲ್ಲಿ ವೈವಿಧ್ಯತೆಯಿದೆ. ಓಶೋ ಚಿಂತನೆ, ದೀಪಾ ಹಿರೇಗುತ್ತಿ ಅವರ ಬರಹ, ಪತ್ರಿಕೆಯ ಸಪ್ತ ಸಂವತ್ಸರದ ಮಾಣಿಕ್ಯಾವಲೋಕನ, ಚಿತ್ರನಟಿ ಕಲ್ಪನಾ ಅವರ ಬರಹಗಾರ್ತಿಯಾಗಿ ಇನ್ನೊಂದು ಮುಖದ ಬಗ್ಗೆ, ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರ ರಾಜಕಾರಣದ ಬರಹ, ಸಿನೆಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರ ತೆರೆ ಮರೆಯ ಕಥೆ, ಯುವ ಹೃದಯದ ಬರಹ, ವಿದ್ಯಾ ಅರಮನೆ ಹಾಗೂ ನಿರಾಳ ಅವರ ಪುಟ್ಟ ಕಥೆಗಳು, ಗುರುರಾಜ ಕೋಡ್ಕಣಿ ಅವರ ೫ ಕೋಟಿ ರೂಪಾಯಿ ಎಂಬ ರೋಚಕ ಬರಹ, ಒಂದು ಗಝಲ್, ಆರೋಗ್ಯ ಬರಹ, ಪದಬಂಧ, ವಿಜ್ಞಾನ ವಿಶೇಷ ಹೀಗೆ ಪತ್ರಿಕೆಯಲ್ಲಿನ ವಿಶೇಷತೆಗಳಿಗೆ ಕೊನೆಯಿಲ್ಲ.
ಪತ್ರಿಕೆಯ ವಿಶೇಷತೆ ಎಂದರೆ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದುಗರಿಗೆ ಬೋರ್ ಹೊಡೆಸುವುದಿಲ್ಲ. ಜಾಹೀರಾತೂ ಬಹಳ ಕಡಿಮೆ ಇದೆ. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ ೫೦.೦೦. ಪತ್ರಿಕೆಯು ಬೆಂಗಳೂರಿನ ಕೋರಮಂಗಲದ ವೀರಲೋಕ ಪ್ರತಿಷ್ಟಾನದ ಕಚೇರಿಯಿಂದ ಮುದ್ರಿತವಾಗಿ ಮಾರುಕಟ್ಟೆಗೆ ಪ್ರತೀ ತಿಂಗಳು ಲಗ್ಗೆ ಇಡುತ್ತಿದೆ.