ಕನ್ನಡ ಪತ್ರಿಕಾ ಲೋಕ (ಭಾಗ ೭೬) - ಉತ್ಥಾನ
ಕನ್ನಡ ಪತ್ರಿಕಾ ಲೋಕದ ಒಂದು ಹಳೆಯ ಮಾಸ ಪತ್ರಿಕೆ 'ಉತ್ಥಾನ'. ಕಳೆದ ೫ ದಶಕಗಳಿಂದ ನಿರಂತರವಾಗಿ ಓದುಗರ ಜ್ಞಾನವನ್ನು ತಣಿಸುವ ಪ್ರಯತ್ನವನ್ನು ಮಾಡುತ್ತಿರುವ ಪತ್ರಿಕೆ. ಪ್ರಾರಂಭದ ದಿನಗಳಲ್ಲಿ ತುಷಾರ/ಮಯೂರ ಆಕೃತಿಯಲ್ಲಿ ಹೊರ ಬರುತ್ತಿದ್ದ ಪತ್ರಿಕೆ ಇತ್ತೀಚಿನ ದಶಕದಲ್ಲಿ ತನ್ನ ಆಕಾರವನ್ನು ಸ್ವಲ್ಪ ದೊಡ್ದದಾಗಿ ಹಿಗ್ಗಿಸಿ ಪ್ರಕಟವಾಗುತ್ತಿದೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ೨೦೨೧ರ ಮೇ ತಿಂಗಳದ್ದು (ಸಂಪುಟ ೫೬, ಸಂಚಿಕೆ ೮). ಈ ಸಂಚಿಕೆಯ ೧೩೨ ಪುಟಗಳಲ್ಲಿ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪವನರೇ ಮುಖ್ಯ ಹೈಲೈಟ್. ಅವರ ಅಭಿನಂದನಾ ಸಂಪುಟ ಎಂದು ಕರೆದಿದ್ದಾರೆ.
ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳು, ಕಥೆ, ಪುಟ್ಟ ಕಾದಂಬರಿ, ಕವನ ಮೊದಲಾದುವುಗಳ ಜತೆಗೆ ಖಾಯಂ ಅಂಕಣಗಳಾದ ರಸಪ್ರಶ್ನೆ, ಬೋಧಕಥೆ ಹಾಗೂ ಮಕ್ಕಳ ವಿಭಾಗ ಪ್ರಕಟವಾಗುತ್ತದೆ. ಪತ್ರಿಕೆಯ ಎಲ್ಲಾ ಪುಟಗಳು ವರ್ಣರಂಜಿತವಾಗಿದ್ದು, ಸೊಗಸಾದ, ಗರಿಗರಿಯಾದ ಮುದ್ರಣ ಪೇಪರ್ ಬಳಸಲಾಗಿದೆ.
"ಉತ್ಥಾನ ಎಂದರೆ ಉತ್ಸಾಹ ಮತ್ತು ಕಾರ್ಯಶೀಲತೆಯಿಂದ ಆಲಸ್ಯವನ್ನು ಗೆಲ್ಲಬೇಕು. ಕುತರ್ಕವನ್ನು ಸಿದ್ಧಾಂತದ ದೃಢತೆಯಿಂದ ಎದುರಿಸಿ ಗೆಲ್ಲಬೇಕು. ಅಧಿಕಪ್ರಸಂಗವನ್ನು ಮೌನದಿಂದ ಗೆಲ್ಲಬೇಕು, ಹಿಮ್ಮತ್ತಿನಿಂದ ಭೀತಿಯನ್ನು ಹಿಂದಿಕ್ಕಬೇಕು" ಎಂದು ಮುದ್ರಿಸಿದ್ದಾರೆ ಪತ್ರಿಕೆಯಲ್ಲಿ. ಎಸ್ ಆರ್ ರಾಮಸ್ವಾಮಿ ಇವರು ಗೌರವ ಪ್ರಧಾನ ಸಂಪಾದಕರಾಗಿಯೂ, ನಾ ದಿನೇಶ್ ಹೆಗ್ಡೆ ಇವರು ವ್ಯವಸ್ಥಾಪಕ ಸಂಪಾದಕರಾಗಿಯೂ, ಕಾಕುಂಜೆ ಕೇಶವ ಭಟ್ಟ ಇವರು ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೋತ್ಥಾನ ಮುದ್ರಣಾಲಯದಲ್ಲಿ ಮುದ್ರಿತಗೊಂಡು ಪ್ರತೀ ತಿಂಗಳು ಮಾರುಕಟ್ಟೆಗೆ ಬರುತ್ತಿದೆ. ಪ್ರಕಾಶಕರು -ಉತ್ಥಾನ ಟ್ರಸ್ಟ್, ಬೆಂಗಳೂರು.
ಪುಸ್ತಕದ ತುಂಬೆಲ್ಲಾ ಕನ್ನಡ ಅಂಕಿಗಳನ್ನು ಬಳಸಿದ್ದಾರೆ. ಪತ್ರಿಕೆಯ ಮುಖಬೆಲೆ ರೂ.೨೦.೦೦, ವಾರ್ಷಿಕ ಚಂದಾ ರೂ. ೨೨೦.೦೦. ಉತ್ಥಾನ ಒಂದು ಸದಭಿರುಚಿಯ ಮಾಸಿಕ ಎನ್ನುತ್ತಾರೆ ಇದರ ಓದುಗರು.