ಕನ್ನಡ ಪತ್ರಿಕಾ ಲೋಕ (ಭಾಗ ೭೯) - ಎನ್ ಕೌಂಟರ್

ಇಕ್ಬಾಲ್ ಕುತ್ತಾರ್ ಇವರು ಪ್ರಯೋಗಿಸುವ ‘ಎನ್ ಕೌಂಟರ್' ಎಂಬ ಮಾಸ ಪತ್ರಿಕೆಯು ಕಳೆದ ೧೬ ವರ್ಷಗಳಿಂದ ಹೊರಬರುತ್ತಿದೆ. ಇದರ ಸಂಪಾದಕರು ಇಕ್ಬಾಲ್ ಕುತ್ತಾರ್ ಇವರು. ಪತ್ರಿಕೆಯನ್ನು ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಕಚೇರಿಯನ್ನು ಹೊಂದಿರುವ ಗ್ಲೋಬಲ್ ಅಸೋಸಿಯೇಟ್ಸ್ ಇವರು ಪ್ರಕಾಶಿಸುತ್ತಿದ್ದಾರೆ.
ಟ್ಯಾಬಲಾಯ್ಡ್ ಆಕಾರದ ೮ ಪುಟಗಳು. ಎಲ್ಲಾ ಪುಟಗಳು ಕಪ್ಪು ಬಿಳುಪು. ಪತ್ರಿಕೆಯಲ್ಲಿ ರಾಜಕೀಯ, ಕ್ರೈಂ ಸುದ್ದಿಗಳು ಮತ್ತು ಅವುಗಳ ಫಾಲೋ ಅಪ್, ಅಂಡರ್ ವರ್ಲ್ಡ್ ಸಂಗತಿಗಳು ಬೆಳಕು ಕಾಣುತ್ತವೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ಎಪ್ರಿಲ್ ೨೦೨೧ರ ಸಂಚಿಕೆ. ಈ ಸಮಯದಲ್ಲಿ ಪತ್ರಿಕೆಗೆ ೧೬ ವರ್ಷ ತುಂಬಿತ್ತು. ಈ ಸಂಚಿಕೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹಗರಣಗಳ ಬಗ್ಗೆ ಮುಖ್ಯ ಸುದ್ದಿಯಾಗಿ ಪ್ರಕಟವಾಗಿತ್ತು.
ಸಂಪಾದಕರಾದ ಇಕ್ಬಾಲ್ ಕುತ್ತಾರ್ ಇವರು ಪತ್ರಿಕೆಯಲ್ಲಿನ ಬಹುತೇಕ ಲೇಖನಗಳನ್ನು ಬರೆಯುತ್ತಿದ್ದರು. ಫೈರಿಂಗ್ ಎಂಬ ಸಂಪಾದಕೀಯ, ಹಕೀಕತ್ ಎಂಬ ಜಾವೇದ್ ಅಖ್ತರ್ ಅವರ ಆತ್ಮಕತೆ, ಹೋಂಡಾ ಬೈಕ್ ನ ಸಂಸ್ಥಾಪಕನಾದ ಸಾಯ್ ಚಿರೋ ಹೋಂಡಾ ಬಗ್ಗೆ ‘ಗನ್ ಪಾಯಿಂಟ್' ಎಂಬ ಬರಹ ಈ ಸಂಚಿಕೆಯಲ್ಲಿದೆ. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ.೮.೦೦ ಆಗಿತ್ತು. ಪತ್ರಿಕೆಯು ಈಗಲೂ ಮುದ್ರಣವಾಗುತ್ತಿದೆ ಎಂಬ ಮಾಹಿತಿ ಇದೆ.