ಕನ್ನಡ ಪತ್ರಿಕಾ ಲೋಕ (ಭಾಗ ೮೦) - ಉದಯ ಕರ್ನಾಟಕ

ಕನ್ನಡ ಪತ್ರಿಕಾ ಲೋಕ (ಭಾಗ ೮೦) - ಉದಯ ಕರ್ನಾಟಕ

ಕನ್ನಡ ಗೆಳೆಯ-ಗೆಳತಿಯರ ನಲ್ಮೆಯ ‘ಉದಯ ಕರ್ನಾಟಕ' ಪಾಕ್ಷಿಕ ಪತ್ರಿಕೆ ಬೆಂಗಳೂರಿನಿಂದ ಪ್ರಕಟವಾಗುತ್ತಿದೆ. ಪತ್ರಿಕೆಯ ಸಂಪಾದಕರು ಅರುಣ್ ಗೌಡ ಆಲಿಯಾಸ್ ಎಂ.ಪಿ.ಅರುಣ್ ಕುಮಾರ್. ಟ್ಯಾಬಲಾಯ್ಡ್ ಆಕಾರದ ೧೬ ಪುಟಗಳು. ಎಲ್ಲಾ ಪುಟಗಳು ಕಪ್ಪು ಬಿಳುಪು. ನಮ್ಮದು ನಿರ್ಭೀತ ಪತ್ರಿಕೋದ್ಯಮ ಎಂದಿದ್ದಾರೆ ಸಂಪಾದಕರು.

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಮೇ ೧೬-೩೧, ೨೦೨೨ (ಸಂಪುಟ-೨೧, ಸಂಚಿಕೆ-೧೮) ಸಂಚಿಕೆಯಲ್ಲಿ ಸಚಿವ ಆನಂದ್ ಸಿಂಗ್ ಅವರ ಭೂ ಹಗರಣದ ವಿಷಯ ಮುಖಪುಟ ಲೇಖನವಾಗಿದೆ. ಇದರ ಜೊತೆಗೆ ಸಂಸದೆ ಸುಮಲತಾ ಬಿಜೆಪಿಗೆ ಹೋಗುತ್ತಾರಾ? ಎಂಬ ಸುದ್ದಿಯೂ ಇದೆ. ಸಂಪಾದಕರಾದ ಅರುಣ್ ಗೌಡ ಅವರು ‘ಮೈವಾಯ್ಸ್' ಎಂಬ ಹೆಸರಿನಲ್ಲಿ ಸಂಪಾದಕೀಯ ಬರೆಯುತ್ತಾರೆ. ಹದಿಹರೆಯದ ಓದುಗರಿಗಾಗಿ ‘ಪ್ರಣಯ ಪಲ್ಲವ', ಓಶೋ ಅಭಿಮಾನಿಗಳಿಗೆ ‘ಓಶೋ ಮಾರ್ಗ' ಮೊದಲಾದ ಅಂಕಣಗಳಿವೆ. ಪತ್ರಿಕೆಯಲ್ಲಿ ಬಹುತೇಕ ಕ್ರೈಂ ಸುದ್ದಿಗಳು ಮತ್ತು ರಾಜಕೀಯ ಸುದ್ದಿಗಳೇ ತುಂಬಿಕೊಂಡಿವೆ. ಜಾಹೀರಾತು ಇಲ್ಲ.

ಪತ್ರಿಕೆಯಲ್ಲಿ ಧರ್ಮೇಂದ್ರ ಪೂಜಾರಿ, ಸಂಕ್ರಾಂತಿ ಸತೀಶ್, ಚಂದ್ರು ಬೋವೇರ, ಎಂ.ಎಸ್. ರೆಡ್ಡಿ, ಮಂಜುನಾಥ ನೀಲಸೋಗೆ ಮೊದಲಾದ ವರದಿಗಾರರ ಬರಹಗಳಿವೆ. ಪತ್ರಿಕೆಯು ಹದಿನೈದು ದಿನಕ್ಕೊಮ್ಮೆ ಬೆಂಗಳೂರಿನ ಹಳೇ ಮದ್ರಾಸ್ ರಸ್ತೆಯಲ್ಲಿರುವ ಎಂ ಎನ್ ಎಸ್ ಪ್ರಿಂಟರ್ಸ್ ಪ್ರೈ. ಲಿ. ಇಲ್ಲಿ ಮುದ್ರಣಗೊಂಡು ಮಾರುಕಟ್ಟೆಗೆ ಬರುತ್ತಿದೆ. ಪತ್ರಿಕೆಯ ಕಚೇರಿ ಬೆಂಗಳೂರಿನ ವಿಜಯನಗರದಲ್ಲಿದೆ. ಕಳೆದ ಎರಡು ದಶಕಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ. ೧೫.೦೦. ಚಂದಾ ವಿವರಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ.