ಕನ್ನಡ ಪತ್ರಿಕಾ ಲೋಕ (ಭಾಗ ೮೨) - ಕುಂದಪ್ರಭ
ಕಳೆದ ಮೂರು ದಶಕಗಳಿಂದ ನಿರಂತರವಾಗಿ ಕುಂದಾಪುರ ತಾಲೂಕಿನ ಸುದ್ದಿ ಸಮಾಚಾರಗಳನ್ನು ತಿಳಿಸುತ್ತಿರುವ ವಾರ ಪತ್ರಿಕೆಯೇ ‘ಕುಂದಪ್ರಭ'. ಯು ಎಸ್ ಶೆಣೈ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ಕುಂದಪ್ರಭ ಪತ್ರಿಕೆಗೆ ಈಗ ೩೨ ವರ್ಷಗಳು ತುಂಬಿದೆ. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ವಿಶೇಷ ಸಂದರ್ಭಗಳಲ್ಲಿ ಹೆಚ್ಚಿನ ಪುಟಗಳೊಂದಿಗೆ ಹೊರಬರುತ್ತದೆ. ೪ ಪುಟಗಳು ವರ್ಣರಂಜಿತವಾಗಿಯೂ ೪ ಪುಟಗಳೂ ಕಪ್ಪು ಬಿಳುಪಿನಲ್ಲೂ ಮುದ್ರಿತವಾಗುತ್ತದೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೪, ೨೦೨೨ರದ್ದು (ಸಂ:೩೨, ಸಂ:೩೫). ಪತ್ರಿಕೆಯಲ್ಲಿ ಕುಂದಾಪುರ ತಾಲೂಕಿನ ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸಂಪಾದಕೀಯದಲ್ಲಿ ಚಿತ್ರನಟ ರಮೇಶ್ ಅರವಿಂದ್ ಕುರಿತ ‘ಸ್ಪೂರ್ತಿಯಿಂದ ರಮೇಶ್' ಎಂಬ ಬರಹವಿದೆ. ಕೋ.ಶಿವಾನಂದ ಕಾರಂತರ ಅಂಕಣ ‘ವ್ಯಕ್ತಿ, ವಿಚಾರ, ವಠಾರ' ದಲ್ಲಿ ಶ್ರೀಮತಿ ಸುಮಿತ್ರಾ ದತ್ತಾನಂದ ಇವರ ಬಗ್ಗೆ ಮಾಹಿತಿಯಿದೆ. ಬಹಳಷ್ಟು ಜಾಹೀರಾತುಗಳು ಪತ್ರಿಕೆಯ ಪುಟಗಳ ತುಂಬೆಲ್ಲಾ ಇವೆ.
ಪತ್ರಿಕೆಯ ಕಚೇರಿ ಎನ್ ಆರ್ ಕಾಂಪ್ಲೆಕ್ಸ್, ಕುಂದಾಪುರದಲ್ಲಿದ್ದು ಪ್ರತೀವಾರ ಮಂಗಳೂರಿನ ಯೆಯ್ಯಾಡಿಯಲ್ಲಿರುವ ದಿಗಂತ ಮುದ್ರಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಮುಖ ಬೆಲೆ ರೂ ೫.೦೦. ವಾರ್ಷಿಕ ಚಂದಾ ೩೫೦.೦೦, ಅಂಚೆಯಲ್ಲಿ ಕಳಿಸುವುದಾದರೆ ರೂ.೫೦೦.೦೦. ಪತ್ರಿಕೆಯು ಈಗಲೂ ಕ್ಲಪ್ತ ಕಾಲಕ್ಕೆ ಮುದ್ರಿತವಾಗಿ ಹೊರಬರುತ್ತಿದೆ ಎಂಬ ಮಾಹಿತಿ ಚಂದಾದಾರರಿಂದ ದೊರೆತಿದೆ.