ಕನ್ನಡ ಪತ್ರಿಕಾ ಲೋಕ (ಭಾಗ ೮೩) - ಸ್ನೇಹ ಸ್ಪೂರ್ತಿ
ಮೊಬೈಲ್ ಎಂಬ ವಸ್ತು ನಮ್ಮನ್ನು ಆಳುವ ಮೊದಲು ನಮಗೆ ಸಂಪರ್ಕ ಸಾಧನಗಳು ಎಂದು ಇದ್ದದ್ದು ಪತ್ರಗಳು. ಅಂಚೆಯಣ್ಣ ತಂದು ಕೊಡುವ ಪತ್ರಗಳಿಗೆ ಕಾದ ದಿನಗಳು ಈಗಿನ ಜನಾಂಗದವರಿಗೆ ಅಳಿದು ಉಳಿದ ಕಥೆಗಳು ಅಷ್ಟೇ. ಪತ್ರದಿಂದ ಪತ್ರ ಮೈತ್ರಿ ಬೆಳೆಯುತ್ತಿತ್ತು. ಈ ಸಮಯದಲ್ಲಿ ಪತ್ರಮೈತ್ರಿಯಲ್ಲಿರುವ ಗೆಳೆಯ-ಗೆಳತಿಯರಿಗಾಗಿ ಮೀಸಲಾಗಿದ್ದ ಒಂದು ಪತ್ರಿಕೆ ಪ್ರಕಟವಾಗುತ್ತಿತ್ತು. ಅದರ ಹೆಸರು ‘ಸ್ನೇಹ ಸ್ಪೂರ್ತಿ'. ಇದು ಕನ್ನಡದ ಮೊದಲ ಪತ್ರಮಿತ್ರರ ಮಾಸ ಪತ್ರಿಕೆ ಎಂದು ಹೇಳಿಕೊಂಡಿದ್ದಾರೆ.
ಪತ್ರಿಕೆಯು ಎ೪ ಆಕೃತಿಯ ೮ ಪುಟಗಳನ್ನು ಹೊಂದಿದ್ದು, ಪತ್ರಿಕೆಯ ಶೀರ್ಷಿಕೆ ಮಾತ್ರ ಕೆಂಪು ಬಣ್ಣದಲ್ಲಿರುತ್ತಿತ್ತು. ಉಳಿದ ಪುಟಗಳು ಕಪ್ಪು ಬಿಳುಪು ಮುದ್ರಣ. ಪತ್ರಿಕೆಯು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿದ್ದು, ಶ್ರೀಮತಿ ಶೈಲಾ ಜಗದೀಶ್ ಇವರು ಸಂಪಾದಕರು ಹಾಗೂ ಪ್ರಕಾಶಕರಾಗಿದ್ದರು. ಎಂ ಜಗದೀಶ್ ಇವರು ಗೌರವ ಸಂಪಾದಕರಾಗಿಯೂ, ಕೆ ಎನ್ ಚಂದ್ರಪ್ರಸಾದ್ ಇವರು ಗೌರವ ಉಪ ಸಂಪಾದಕರಾಗಿಯೂ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಪತ್ರಿಕೆಯ ಕಚೇರಿ ಬೆಂಗಳೂರಿನ ಹೊಸ ತಿಪ್ಪಸಂದ್ರದ ಮೈಕೆಲ್ ಪಾಳ್ಯದಲ್ಲಿತ್ತು. ಪತ್ರಿಕೆಯು ಬೆಂಗಳೂರಿನ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪ್ರಿಂಟರ್ಸ್ ಇಲ್ಲಿ ಮುದ್ರಿತವಾಗುತ್ತಿತ್ತು.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಆಗಸ್ಟ್ ೧೯೯೪ (ಸಂ:೨, ಸಂಚಿಕೆ:೬) ರ ಸಂಚಿಕೆಯಾಗಿದೆ. ಈ ಪತ್ರಿಕೆಯಲ್ಲಿ ಪತ್ರಮೈತ್ರಿಗೆ ಸಂಬಂಧಿಸಿದ ಲೇಖನಗಳು, ಪತ್ರಮಿತ್ರರು ಬರೆದ ಹನಿಗವನಗಳು, ನಗೆಹನಿಗಳು, ಪತ್ರಮಿತ್ರರ ಪತ್ರಗಳು ಇರುತ್ತಿದ್ದವು. ಪತ್ರಮೈತ್ರಿಯನ್ನು ಮಾಡ ಬಯಸುವ ವ್ಯಕ್ತಿಗಳ ಹೆಸರು ಮತ್ತು ವಿಳಾಸಗಳನ್ನು ನೀಡುತ್ತಿದ್ದರು. ಅದನ್ನು ಬಳಸಿಕೊಂಡು ಮೈತ್ರಿಯನ್ನು ಮುಂದುವರೆಸಬಹುದಾಗಿತ್ತು. ಈ ಸಂಚಿಕೆಯಲ್ಲಿ ‘ಹೊನ್ನಿನ ಹಾಳೆಯಲ್ಲಿ ಪತ್ರಗಳ ಬರಹ' ಎಂಬ ವಿಶೇಷ ವರದಿಯನ್ನು ಧನಪಾಲ್ ಸಿಂಗ್ ರಜಪೂತ್ ಎಂಬವರು ಬರೆದಿದ್ದಾರೆ. ಹಾಸ್ಯ ನಟ ಎಂ ಎಸ್ ಉಮೇಶ್ ಅವರ ಪುಟ್ಟ ಸಂದರ್ಶನವೂ ಪತ್ರಿಕೆಯಲ್ಲಿದೆ. ಗೌ.ಸಂಪಾದಕರ ಅಂಕಣ ‘ಕುಶಲ' ದಲ್ಲಿ ಪತ್ರಮೈತ್ರಿಯ ಬಗ್ಗೆ ಪುಟ್ಟ ಪುಟ್ಟ ಸಂಗತಿಗಳನ್ನು ಬರೆದಿದ್ದಾರೆ.
ಪತ್ರಿಕೆಯ ಮುಖ ಬೆಲೆ ರೂ.೧.೦೦ ಹಾಗೂ ವಾರ್ಷಿಕ ಚಂದಾ ರೂ.೧೫.೦೦. ಪತ್ರಿಕೆಯು ಸುಮಾರು ಮೂರು ವರ್ಷಗಳ ಕಾಲ ಪ್ರಕಟವಾಗಿರಬಹುದು ಎಂದು ಒಂದು ಅಂದಾಜು. ನಂತರದ ದಿನಗಳಲ್ಲಿ ಮೊಬೈಲ್, ಇಂಟರ್ನೆಟ್ ಮೊದಲಾದ ವ್ಯವಸ್ಥೆಗಳು ಬಂದ ಬಳಿಕ ಪತ್ರದ ಮೂಲಕ ಮೈತ್ರಿ ಎಂಬ ವಿಚಾರ ಹಳೆಯದಾಗಿ ಹೋಯಿತು.