ಕನ್ನಡ ಪತ್ರಿಕಾ ಲೋಕ (ಭಾಗ ೮೬) - ಜನಪ್ರಿಯ ವಿಜ್ಞಾನ

ಕನ್ನಡ ಪತ್ರಿಕಾ ಲೋಕ (ಭಾಗ ೮೬) - ಜನಪ್ರಿಯ ವಿಜ್ಞಾನ

ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುತ್ತಿರುವ ಮಾಸ ಪತ್ರಿಕೆ ‘ಜನಪ್ರಿಯ ವಿಜ್ಞಾನ'. ಜನ ಸಾಮಾನ್ಯರಲ್ಲೂ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟಬೇಕು, ಅವರು ತಮ್ಮ ಸುತ್ತಮುತ್ತ ಆಗುತ್ತಿರುವ ವಿಜ್ಞಾನ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಶಯದೊಂದಿಗೆ ಹೊರ ತಂದ ಪತ್ರಿಕೆ ಇದು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಸಹಸ್ರಮಾನದ ವಿಶೇಷ ಸಂಚಿಕೆ (ಜನವರಿ ೨೦೦೦). ವಿಶೇಷ ಸಂಚಿಕೆಯಾದುದರಿಂದ ಈ ಪತ್ರಿಕೆಯ ಪುಟಗಳ ಸಂಖ್ಯೆ ಹೆಚ್ಚಿವೆ. 

ಪ್ರಪಂಚದಾದ್ಯಂತ ನಡೆಯುತ್ತಿರುವ ಹೊಸ ಹೊಸ ಆವಿಷ್ಕಾರಗಳ ಜ್ಞಾನವನ್ನು ಸರಳ ಭಾಷೆಯಲ್ಲಿ ಹಂಚಬೇಕು ಎನ್ನುವ ಒಂದು ಮಹತ್ವದ ಉದ್ದೇಶ ಸಾಧನೆಗಾಗಿ ಬೆಂಗಳೂರು ವಿಶ್ವವಿದ್ಯಾನಿಲಯವು ೧೯೭೭ರಲ್ಲಿ ಕಾರ್ಯತತ್ಪರವಾಗಿ ಹೊರತಂದ ಮಾಸಿಕವೇ ‘ಜನಪ್ರಿಯ ವಿಜ್ಞಾನ'. ನಂತರ ಪ್ರತೀ ತಿಂಗಳು ನಿಯಮಿತವಾಗಿ ಪ್ರಕಟವಾಗುತ್ತಾ ಬಂದು ಸಮಯ ಕಳೆದಂತೆ ಪ್ರಕಟಣೆ ವಿಳಂಬವಾಗುತ್ತಾ ಹೋಗಿ ಜುಲೈ ೧೯೯೫ರಂದು ಪತ್ರಿಕೆಯ ಕೊನೆಯ ಸಂಚಿಕೆ ಪ್ರಕಟವಾಯಿತು. ನಂತರ ಸುಮಾರು ನಾಲ್ಕು ವರ್ಷಗಳ ಕಾಲ ಸುಪ್ತಾವಸ್ಥೆಯಲ್ಲಿದ್ದ ಪತ್ರಿಕೆ ಹೊಸ ಶತಮಾನಕ್ಕೆ ಕಾಲಿಡುವ ಸಂದರ್ಭದಲ್ಲಿ ಶತಮಾನದ ವಿಶೇಷಾಂಕವಾಗಿ ಪುನರ್ಜನ್ಮ ಪಡೆದುಕೊಂಡಿತು. ಮರು ಜನ್ಮ ಪಡೆದ ಪತ್ರಿಕೆ ತನ್ನ ಪ್ರಾರಂಭಿಕ ವರ್ಷಗಳಲ್ಲಿ ತ್ರೈಮಾಸಿಕವಾಗಿ ನಂತರ ಮಾಸಿಕವಾಗಿ ಪ್ರಕಟಿಸಲ್ಪಡುವುದು ಎಂದು ಈ ಪತ್ರಿಕೆಯಲ್ಲಿ ಪ್ರಕಟಣೆ ನೀಡಲಾಗಿದೆ.

೨೦೦೦ನೇ ಇಸವಿಯಲ್ಲಿ ಜನಪ್ರಿಯ ವಿಜ್ಞಾನ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಪ್ರೊ. ಕತ್ರೆ ಶಕುಂತಲ, ಸಂಪಾದಕ ಮಂಡಳಿ ಸದಸ್ಯರಾಗಿ ಪ್ರೊ. ಎಸ್.ಬಿ.ಸುಳ್ಯ, ಪ್ರೊ. ಬಿ ಎಸ್ ಶೇಷಾದ್ರಿ, ಪ್ರೊ. ಬಿ ಎ ಕಾಗಲಿ, ಶ್ರೀಮತಿ ಬಿ ಕೆ ಮೀರಾ, ಸಂಚಾಲಕರಾಗಿ ಎಂ. ಕೃಷ್ಣೇಗೌಡ, ಪ್ರಕಾಶಕರಾಗಿ ಎಚ್ ಕೆ ಜಯದೇವ ಇವರು ಕಾರ್ಯ ನಿರ್ವಹಿಸುತ್ತಿದ್ದರು. ಸಹಸ್ರಮಾನದ ವಿಶೇಷ ಸಂಚಿಕೆಯಲ್ಲಿ ಗಣಕ ಯಂತ್ರ ವಿಜ್ಞಾನ, ಗಣಿತ ವಿಜ್ಞಾನ, ಜೀವ ವಿಜ್ಞಾನ, ಭೂ ವಿಜ್ಞಾನ, ಭೌತ ಮತ್ತು ವಿದ್ಯುನ್ಮಾನ ವಿಜ್ಞಾನ, ರಾಸಾಯನ ವಿಜ್ಞಾನ ಹಾಗೂ ವೈದ್ಯಕೀಯ ವಿಜ್ಞಾನದ ಬಗ್ಗೆ ಲೇಖನಗಳಿವೆ.

ಪತ್ರಿಕೆಯು ಸುಧಾ ಪತ್ರಿಕೆಯ ಗಾತ್ರಕ್ಕಿಂತ ಸ್ವಲ್ಪ ಸಣ್ಣಗಿದೆ. ವಿಶೇಷ ಸಂಚಿಕೆಯಾಗಿರುವ ಕಾರಣ ೪೮ ಪುಟಗಳಿವೆ. ಕಪ್ಪು ಬಿಳುಪು ಮುದ್ರಣದ ಪುಟಗಳು. ಬಿಡಿ ಪ್ರತಿ ರೂ ೧೫.೦೦ ಆಗಿದೆ. ವೈಯಕ್ತಿಕ ವಾರ್ಷಿಕ ಚಂದಾ ರೂ ೬೦.೦೦ ಹಾಗೂ ಆಜೀವ ಸದಸ್ಯತ್ವವು ರೂ. ೧,೦೦೦.೦೦ ಆಗಿತ್ತು.