ಕನ್ನಡ ಪತ್ರಿಕಾ ಲೋಕ (ಭಾಗ ೮೯) - ಕರಾವಳಿ ಪ್ರಭ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಿಂದ ಪ್ರತೀ ಹದಿನೈದು ದಿನಕ್ಕೊಮ್ಮೆ ಪ್ರಕಾಶಿತವಾಗುವ ಪತ್ರಿಕೆಯೇ ‘ಕರಾವಳಿ ಪ್ರಭ’ ಪಾಕ್ಷಿಕ. ಪತ್ರಿಕೆಯ ಸಂಪಾದಕರು ರಾಘವೇಂದ್ರ ಹೆಬ್ಬಾರ ಇವರು. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು. ೮ ಪುಟಗಳು ಬಣ್ಣದಲ್ಲಿಯೂ, ೪ ಪುಟಗಳು ಕಪ್ಪು ಬಿಳುಪು ಬಣ್ಣದಲ್ಲಿ ಮುದ್ರಣವಾಗುತ್ತಿದೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ೨೪-೧೦-೨೦೨೨ (ಸಂಪುಟ ೪, ಸಂಚಿಕೆ-೨) ರ ಸಂಚಿಕೆ. ಇದು ದೀಪಾವಳಿ ವಿಶೇಷಾಂಕವಾದುದರಿಂದ ಪತ್ರಿಕೆಯ ತುಂಬಾ ಜಾಹೀರಾತು ಇದೆ. ಪತ್ರಿಕೆಯ ಒಳಪುಟಗಳಲ್ಲಿ ಸಂಪಾದಕರ ಸಂಪಾದಕೀಯ, ಶ್ರೀಧರ ಶೇಟ್ ಶಿರಾಲಿ ಅವರ ‘ಕಾವ್ಯಜ್ಯೋತಿ’, ಪವಿತ್ರಾ ಮುರ್ಡೇಶ್ವರ ಅವರ ‘ದೀಪಗಳ ಹಬ್ಬ ದೀಪಾವಳಿ', ದೊಡ್ಡೋಡಿ. ಗ ಇವರ ‘ಚಿಂತನ ಮಂಥನ’, ಪ್ರೊ. ಆರ್ ಎಸ್ ನಾಯಕ, ಭಟ್ಕಳ ಇವರ ಮೊಯಿಲಿ ರಾಮಾಯಣದೊಳಗೊಂದು ವಿಹಾರ ಮೊದಲಾದ ಬರಹಗಳಿವೆ. ಈ ಬರಹಗಳ ಜೊತೆಗೆ ಪ್ರಚಲಿತ ವಿದ್ಯಮಾನಗಳ ಸುದ್ದಿಗಳಿವೆ.
‘ಕರಾವಳಿ ಪ್ರಭ' ಪತ್ರಿಕೆಯು ಪುರಸಭೆಯ ಶಾಪ್ ನಂ-೧೪, ಭಟ್ಕಳ ಇಲ್ಲಿ ಕಚೇರಿಯನ್ನು ಹೊಂದಿದ್ದು, ಭಟ್ಕಳದ ಜನಶ್ರೀ ಪ್ರಿಂಟರ್ಸ್ ಇಲ್ಲಿ ಮುದ್ರಣವಾಗುತ್ತಿದೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ.೧೫.೦೦ ಆಗಿದ್ದು, ವಾರ್ಷಿಕ ಚಂದಾ ರೂ. ೩೫೦.೦೦ ಹಾಗೂ ಅಜೀವ ಸದಸ್ಯತ್ವ ರೂ.೧೦,೦೦೦.೦೦ ಆಗಿದೆ. ಪತ್ರಿಕೆಯು ಈಗಲೂ ಸಕಾಲದಲ್ಲಿ ಮುದ್ರಿತವಾಗುತ್ತಿದೆ ಎಂದು ತಿಳಿದು ಬಂದಿದೆ.