ಕನ್ನಡ ಪತ್ರಿಕಾ ಲೋಕ (ಭಾಗ ೯೮) - ರಾಜ್ಯ ಧರ್ಮ

ಕನ್ನಡ ಪತ್ರಿಕಾ ಲೋಕ (ಭಾಗ ೯೮) - ರಾಜ್ಯ ಧರ್ಮ

‘ರಾಜ್ಯ ಧರ್ಮ' ಎಂಬ ಪ್ರಾದೇಶಿಕ ಕನ್ನಡ ದಿನ ಪತ್ರಿಕೆಯು ಕಳೆದ ಐದು ದಶಕಗಳಿಂದ ಪ್ರಕಟವಾಗುತ್ತಿದೆ. ಮೈಸೂರು ಜಿಲ್ಲೆ ಕೇಂದ್ರೀಕೃತವಾಗಿರುವ ಈ ಪತ್ರಿಕೆಯು ಮಂಡ್ಯ, ಚಾಮರಾಜನಗರ, ಮಡಿಕೇರಿ, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಪ್ರಸಾರವನ್ನು ಹೊಂದಿದೆ. 

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ಜನವರಿ ೩೧, ೨೦೨೩ (ಸಂಪುಟ: ೫೯, ಸಂಚಿಕೆ: ೨೧೬) ರ ಸಂಚಿಕೆಯಾಗಿದೆ. ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು, ೬ ಪುಟಗಳನ್ನು ಹೊಂದಿದೆ. ಎರಡು ಪುಟ ವರ್ಣದಲ್ಲೂ ಉಳಿದ ನಾಲ್ಕು ಪುಟಗಳು ಕಪ್ಪು ಬಿಳುಪು ಮುದ್ರಣ ಹೊಂದಿದೆ. ಪತ್ರಿಕೆಯಲ್ಲಿ ದೈನಂದಿನ ಸುದ್ದಿ ವಿಷಯಗಳ ಬಗ್ಗೆ ಮಾಹಿತಿ ಇದೆ. ಸಂಪಾದಕೀಯ, ವಿಶೇಷ ಲೇಖನ ಯಾವುದೂ ಕಂಡು ಬರುವುದಿಲ್ಲ. 

ಮಹಿ ಮಹೇಶ್ ಇವರು ಪತ್ರಿಕೆಯ ಪ್ರಧಾನ ಸಂಪಾದಕ, ಮುದ್ರಕ ಮತ್ತು ಪ್ರಕಾಶಕರಾಗಿದ್ದಾರೆ. ಕವಿತ ಎಸ್ ಇವರು ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆಯು ಮೆಟ್ರೋಪಾಲಿಟನ್ ಮೀಡಿಯಾ ಕಂಪೆನಿ ಲಿಮಿಟೆಡ್, ಮೈಸೂರು ಇಲ್ಲಿ ಮುದ್ರಿತವಾಗುತ್ತಿದೆ. ಕಚೇರಿಯು ಮೈಸೂರಿನ ರಾಮಾನುಜ ರಸ್ತೆಯಲ್ಲಿದೆ. ಪತ್ರಿಕೆಯ ಮುಖ ಬೆಲೆ ರೂ ೨.೦೦ ಆಗಿದ್ದು ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯು ಈಗಲೂ ಸೂಕ್ತ ಸಮಯಕ್ಕೆ ಮುದ್ರಿತವಾಗುತ್ತಿದೆ.