ಕನ್ನಡ ಪತ್ರಿಕಾ ಲೋಕ (ಭಾಗ ೯೯) - ನಿಜ ದನಿ

ಕನ್ನಡ ಪತ್ರಿಕಾ ಲೋಕ (ಭಾಗ ೯೯) - ನಿಜ ದನಿ

ಮೈಸೂರು ಜಿಲ್ಲೆಯಿಂದ ಕಳೆದ ೨೮ ವರ್ಷಗಳಿಂದ ಪ್ರಕಟವಾಗುತ್ತಿರುವ ದಿನ ಪತ್ರಿಕೆ ‘ನಿಜ ದನಿ'. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ನಿಜ ದನಿ ಪತ್ರಿಕೆಯ ಪ್ರಸಾರವಿದೆ. ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ನಾಲ್ಕು ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣದಲ್ಲೂ, ಮತ್ತೆರಡು ಕಪ್ಪು ಬಿಳುಪು ಮುದ್ರಣದಲ್ಲಿವೆ. ಪತ್ರಿಕೆಯಲ್ಲಿ ದಿನ ನಿತ್ಯದ ಸುದ್ದಿ ಸಮಾಚಾರಗಳು ಮುದ್ರಿತವಾಗುತ್ತಿವೆ. ಬಹುತೇಕ ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜನವರಿ ೨೯, ೨೦೨೩ (ಸಂಪುಟ: ೨೮, ಸಂಚಿಕೆ: ೨೦೨) ರ ಸಂಚಿಕೆಯಾಗಿದೆ. ಈ ಸಂಚಿಕೆಯಲ್ಲಿ ಸುದ್ದಿಗಳನ್ನು ಹೊರತು ಪಡಿಸಿ, ಹುತಾತ್ಮರ ದಿನದ ಸಲುವಾಗಿ ‘ಸರ್ವೋದಯ ಸೂರ್ಯ ರಾಷ್ಟ್ರಪಿತ ಮಹಾತ್ಮ ಗಾಂಧಿ" ಎಂಬ ಅಗ್ರ ಲೇಖನವಿದೆ. ಇದನ್ನು ಹೊರತು ಪಡಿಸಿದರೆ ಯಾವುದೇ ಸಂಪಾದಕೀಯ ಬರಹ ಕಂಡು ಬರುವುದಿಲ್ಲ. 

ಶಾಂತರಾಜು ಅವರು ಪತ್ರಿಕೆಯ ಸಂಪಾದಕ, ಮುದ್ರಕ, ಮಾಲೀಕರಾಗಿ ಹಾಗೂ ಎಸ್. ಸುನಿಲ್ ಕುಮಾರ್ ಅವರು ಉಪ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೆಯು ಮೈಸೂರಿನ ಕೆ ಆರ್ ಮೊಹಲ್ಲಾದಲ್ಲಿ ಕಚೇರಿಯನ್ನು ಹೊಂದಿದ್ದು, ಮುದ್ರಣವಾಗುವ ಸ್ಥಳದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಪತ್ರಿಕೆಯ ಮುಖ ಬೆಲೆ ರೂ.೨.೦೦ ಆಗಿದ್ದು, ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯು ಈಗಲೂ ಕ್ಲಪ್ತ ಕಾಲಕ್ಕೆ ಮುದ್ರಿತವಾಗಿ ಓದುಗರ ಕೈಸೇರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.