ಕನ್ನಡ ಪತ್ರಿಕಾ ಲೋಕ (೧೦) - ಮಲ್ಲಿಗೆ
*ಬಿ. ಎನ್. ಗುಪ್ತ ಅವರ "ಮಲ್ಲಿಗೆ"*
೧೯೬೧ರಲ್ಲಿ ಆರಂಭವಾದ "ಮಲ್ಲಿಗೆ"ಯು ಆ ಕಾಲದ ಒಂದು ಜನಪ್ರಿಯ ಮಾಸಿಕವಾಗಿತ್ತು. ಬೆಂಗಳೂರು ಗಾಂಧಿನಗರದ ಪ್ರಗತಿ ಪ್ರಿಂಟರ್ಸ್ ನಲ್ಲಿ ಪ್ರಕಟವಾಗುತ್ತಿದ್ದ "ಮಲ್ಲಿಗೆ" ಮಾಸಿಕದ ಮುದ್ರಕರು ಮತ್ತು ಪ್ರಕಾಶಕರಾಗಿದ್ದವರು ಬಿ. ಕೃಷ್ಣ ಎಂಬವರು. ಪತ್ರಿಕೆಯ ಮಾಲಕರು ಮತ್ತು ಸಂಪಾದಕರಾಗಿದ್ದವರು ಪ್ರಸಿದ್ಧ ಪತ್ರಿಕೋದ್ಯಮಿಯಾಗಿದ್ದ ಬಿ. ಎನ್. ಗುಪ್ತ (೧೮೯೫ - ೧೯೭೬) ಅವರು.
ಬಿ. ಎನ್. ಗುಪ್ತ ಅವರು "ಮಲ್ಲಿಗೆ" ಮಾತ್ರವಲ್ಲದೆ, "ಪ್ರಜಾಮತ, ವಾರಪತ್ರಿಕೆ, "ಜನಪ್ರಗತಿ" ವಾರಪತ್ರಿಕೆ, "ಜನವಾಣಿ" ದಿನಪತ್ರಿಕೆ ಇತ್ಯಾದಿ ಪತ್ರಿಕೆಗಳನ್ನೂ ನಡೆಸುತ್ತಿದ್ದರು.
"ಮಲ್ಲಿಗೆ" ಯ ಬಿಡಿ ಸಂಚಿಕೆಯ ಬೆಲೆ ೫೦ ಪೈಸೆಯಾಗಿತ್ತು. ವಾರ್ಷಿಕ ಚಂದಾ ಮೊತ್ತ (ಅಂಚೆ ವೆಚ್ಚ ಸೇರಿ) ಎರಡು ರೂಪಾಯಿಯಾಗಿತ್ತು. ನೂರು ಪುಟಗಳ ಪುಸ್ತಕವಾಗಿದ್ದ "ಮಲ್ಲಿಗೆ"ಯಲ್ಲಿ ಹೆಚ್ಚಾಗಿ ಪ್ರಕಟವಾಗುತ್ತಿದ್ದುದು ಕಥೆಗಳು.೧೫-೧೬ ಕಥೆಗಳನ್ನು ಮೊದಲ ಆದ್ಯತೆಯಲ್ಲಿ ಪ್ರಕಟಿಸುತ್ತಿದ್ದ "ಮಲ್ಲಿಗೆ", ಹೊಸ ಹೊಸ ಬರಹಗಾರರರಿಗೆ ಬಹಳಷ್ಟು ಪ್ರೋತ್ಸಾಹಗಳನ್ನು ನೀಡಿ ಕಥೆಗಾರರನ್ನಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಕಥೆಗಳಲ್ಲದೆ ಧಾರವಾಹಿ, ನಗೆ ಲೇಖನಗಳೂ ಮಲ್ಲಿಗೆಯಲ್ಲಿ ಪ್ರಕಟವಾಗುತ್ತಿತ್ತು.
೧೯೬೧ ರಿಂದ ೧೯೭೧ರ ವರೆಗೆ "ಮಲ್ಲಿಗೆ" ಮಾಸಿಕವನ್ನು ನಡೆಸಿದ ಬಿ. ಎನ್. ಗುಪ್ತ ಅವರು ಬಳಿಕ "ಮಲ್ಲಿಗೆ"ಯನ್ನು ಬೇರೆಯವರಿಗೆ ಹಸ್ತಾಂತರಿಸಿದ್ದರು. ನಂತರದ ದಿನಗಳಲ್ಲೂ ಮಲ್ಲಿಗೆ ಬಹಳ ವರ್ಷಗಳ ತನಕ ಪ್ರಕಟವಾಗುತ್ತಿತ್ತು.
~ *ಶ್ರೀರಾಮ ದಿವಾಣ*