ಕನ್ನಡ ಪತ್ರಿಕಾ ಲೋಕ (೧೧) - ಜನ ಪ್ರಗತಿ

ಕನ್ನಡ ಪತ್ರಿಕಾ ಲೋಕ (೧೧) - ಜನ ಪ್ರಗತಿ

*ಬಿ. ಎನ್. ಗುಪ್ತ ಅವರ "ಜನ ಪ್ರಗತಿ"*

೧೯೫೦ರಲ್ಲಿ ಆರಂಭವಾದ "ಜನಪ್ರಗತಿ" ವಾರ ಪತ್ರಿಕೆಯು, 'ವಿಚಾರ ವಿಮರ್ಶೆಗೆ ಮೀಸಲಾದ ರಾಷ್ಟ್ರೀಯ ಸಚಿತ್ರ ಸಾಪ್ತಾಹಿಕ'ವಾಗಿತ್ತು. ಮೂರ್ನಾಲ್ಕು ದಶಕಗಳ ಕಾಲ ನಾಡಿನಾದ್ಯಂತ ಭಾರೀ ಪ್ರಚಾರ, ಪ್ರಸಾರ ಹೊಂದಿದ್ದ ಜನಪ್ರಿಯ ವಾರಪತ್ರಿಕೆಯಾಗಿತ್ತು.

ಬೆಂಗಳೂರು ಗಾಂಧಿನಗರದ ಪ್ರಗತಿ ಪ್ರಿಂಟರ್ಸ್ ನಲ್ಲಿ ಪ್ರಕಟವಾಗುತ್ತಿದ್ದ "ಜನಪ್ರಗತಿ" ಸಾಪ್ತಾಹಿಕದ ಮುದ್ರಕರು ಮತ್ತು ಪ್ರಕಾಶಕರಾಗಿದ್ದವರು ಬಿ. ಕೃಷ್ಣ ಎಂಬವರು. ಪತ್ರಿಕೆಯ ಮಾಲಕರು ಮತ್ತು ಸಂಪಾದಕರಾಗಿದ್ದವರು ಪ್ರಸಿದ್ಧ ಪತ್ರಿಕೋದ್ಯಮಿಯಾಗಿದ್ದ ಬಿ. ಎನ್. ಗುಪ್ತ (೧೮೯೫ - ೧೯೭೬) ಅವರು. ಟ್ಯಾಬ್ಲಾಯ್ಡ್ ಮಾದರಿಯ, ೨೪ ಪುಟಗಳ "ಜನಪ್ರಗತಿ"ಗೆ ಅರುವತ್ತರ ದಶಕದಲ್ಲಿದ್ದ ಬೆಲೆ ಮೂವತ್ತು ಪೈಸೆ.

ಕಥೆ, ಧಾರಾವಾಹಿ, ವಿನೋದ ಬರಹ, ಲೇಖನ, ಸಿನಿಮಾ ಲೇಖನ, ವಾರ ಭವಿಷ್ಯ ವೈವಿಧ್ಯಮಯ ಬರಹಗಳು ಜನಪ್ರಗತಿಯಲ್ಲಿ ಪ್ರಕಟವಾಗುತ್ತಿದ್ದುವು. ಅಯ್ಯಪ್ಪನ ಚಾವಡಿ, ಹೃದಯ ಮಿಲನ, ಸ್ತ್ರೀ, ಎಳೆಯರ ಬಳಗ, ಇದು ಭಾರತ, ಓದುಗರ ಓಲೆ ಇತ್ಯಾದಿ ಖಾಯಂ ಶಿರ್ಷಿಕೆಗಳ ವಿಭಾಗಗಳೂ ಇದ್ದುವು.

ಒಂದೊಂದು ಭಾಗವನ್ನು ಒಬ್ಬೊಬ್ಬರಂತೆ ಹದಿನಾಲ್ಕು ಮಂದಿ ಕಥೆಗಾರರು ಧಾರವಾಹಿಯೊಂದನ್ನು (" ಸಂದಿಗ್ಧದ ಸುಳಿಯಲ್ಲಿ") ಪ್ರಕಟಿಸುವ ಮೂಲಕ ಹೊಸತನದ ಪ್ರಯೋಗವನ್ನೂ ೧೯೬೦ರ ದಶಕದಲ್ಲಿ ಜನಪ್ರಗತಿ ಮಾಡಿದ್ದು, ಅಂದು ವಿಶೇಷವೂ, ವಿಶಿಷ್ಟವೂ ಆಗಿತ್ತು. ಓದುಗರ ವ್ಯಾಪಕ ಪ್ರಶಂಸೆಗೂ ಕಾರಣವಾಗಿತ್ತು.

ಬಿ. ಎನ್. ಗುಪ್ತ ಅವರು "ಜನಪ್ರಗತಿ" ಮಾತ್ರವಲ್ಲದೆ, "ಪ್ರಜಾಮತ" ವಾರಪತ್ರಿಕೆ ಮತ್ತು "ಮಲ್ಲಿಗೆ" ಮಾಸಿಕ ಮತ್ತು "ಜನವಾಣಿ" ದಿನಪತ್ರಿಕೆ ಪತ್ರಿಕೆಗಳನ್ನೂ ನಡೆಸುತ್ತಿದ್ದರು.

~ *ಶ್ರೀರಾಮ ದಿವಾಣ*