ಕನ್ನಡ ಪತ್ರಿಕಾ ಲೋಕ (೧೨) - ಜನವಾಣಿ

ಕನ್ನಡ ಪತ್ರಿಕಾ ಲೋಕ (೧೨) - ಜನವಾಣಿ

*ಬಿ.ಎನ್.ಗುಪ್ತ, ಬಿ.ಎಂ.ಶ್ರೀನಿವಾಸಯ್ಯ, ಬಿ.ಎಸ್.ನಾರಾಯಣ್, ಎಂ.ಡಿ.ನಟರಾಜ್, ಜಿ. ಎಸ್. ನರಸಿಂಹ ಸೋಮಯಾಜಿಯವರ "ಜನವಾಣಿ"*

"ಜನವಾಣಿ" ಪತ್ರಿಕೆ ಆರಂಭವಾದುದು ೧೯೩೪ರಲ್ಲಿ. ಆ ಕಾಲದ ಪ್ರಸಿದ್ದ ಪತ್ರಿಕೋದ್ಯಮಿ ಬಿ. ಎನ್. ಗುಪ್ತ ಅವರು ಮದರಾಸಿನಿಂದ ದಿನ ಪತ್ರಿಕೆಯನ್ನಾಗಿ ಆರಂಭಿಸಿದ "ಜನವಾಣಿ" , ಮದರಾಸ್ ಸರಕಾರದ ಕೆಂಗಣ್ಣಿಗೆ ಗುರಿಯಾಯಿತು. ಪರಿಣಾಮವಾಗಿ ವರ್ಷದ ಬಳಿಕ (೧೯೩೫) ಮದರಾಸಿನಲ್ಲಿ ಪತ್ರಿಕೆಯ ಪ್ರಕಟಣೆಯನ್ನು ಸ್ಥಗಿತಗೊಳಿಸಿ, ಬೆಂಗಳೂರಿನಿಂದ ಪ್ರಕಟಣೆ ಆರಂಭಿಸಿತು. ದಿನ ಪತ್ರಿಕೆಯಾಗಿದ್ದ "ಜನವಾಣಿ" , ಸಾಪ್ತಾಹಿಕವಾಗಿ ಬದಲಾಯಿತು.

ಆರಂಭ ಕಾಲದ ಒಂದಷ್ಟು ವರ್ಷ ಪತ್ರಿಕೆಯ ಸಂಪಾದಕರಾಗಿದ್ದವರು ಕೆ. ಸಿ. ರೆಡ್ಡಿ ಹಾಗೂ ಬಿ. ಪುಟ್ಟಸ್ವಾಮಯ್ಯನವರು. ಬಳಿಕ, ೧೯೩೯ರಿಂದ ೧೯೪೬ರ ವರೆಗೆ ಸ್ವತಹಾ ಬಿ. ಎನ್. ಗುಪ್ತ ಅವರೇ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ೧೯೪೬ರಿಂದ ಪತ್ರಿಕೆ ಸ್ಥಗಿತಗೊಳ್ಳುವ ವರೆಗೆ, ಅಂದರೆ ೧೯೮೭ರ ವರೆಗೂ ಸುಧೀರ್ಘ ಅವಧಿ "ಜನವಾಣಿ" ಯ ಸಂಪಾದಕರಾಗಿ ಸೇವೆ ಸಲ್ಲಿಸಿದವರು ಜಿ. ಎಸ್. ನರಸಿಂಹ ಸೋಮಯಾಜಿಯವರು.

೧೯೪೫ರಲ್ಲಿ ಬಿ. ಎನ್. ಗುಪ್ತ ಅವರು "ಜನವಾಣಿ" ಯ ಒಡೆತನವನ್ನು ಬಿ. ಎಂ. ಶ್ರೀನಿವಾಸಯ್ಯನವರಿಗೆ ಹಸ್ತಾಂತರಿಸಿದರು. ಶ್ರೀನಿವಾಸಯ್ಯನವರ ಆಡಳಿತಾವಧಿಯಲ್ಲಿ ರೋಟರಿ ಮುದ್ರಣ ಯಂತ್ರ ಮತ್ತು ಟೆಲಿ ಪ್ರಿಂಟರ್ ಮೂಲಕ "ಜನವಾಣಿ" ಹೊಸತನದೊಂದಿಗೆ ಮುದ್ರಣವಾಗತೊಡಗಿತು.

೧೯೫೯ರಲ್ಲಿ ಶ್ರೀನಿವಾಸಯ್ಯನವರು ನಿಧನರಾದ ಬಳಿಕ ಪತ್ರಿಕೆಯ ಒಡೆತನ ಅವರ ಪುತ್ರ ಬಿ. ಎಸ್. ನಾರಾಯಣ್ ಅವರಿಗೆ ಸೇರಿತು. ಇವರ ಆಡಳಿತಾವಧಿಯಲ್ಲಿ ಪತ್ರಿಕೆ ಅಮೇರಿಕಾದ "ನ್ಯೂಸ್ ವೀಕ್" ಸಂಸ್ಥೆಯ ಜೊತೆಗೆ ಸುದ್ಧಿಗಳಿಗೆ ಸಂಬಂಧಿಸಿ ಒಡಂಬಡಿಕೆ ಮಾಡಿಕೊಂಡಿತು. ಹೊಸ ಶೈಲಿಯೊಂದಿಗೆ ಪ್ರಕಟವಾಗತೊಡಗಿದ "ಜನವಾಣಿ"ಯಲ್ಲಿ ಜಾಗತಿಕ ಮಟ್ಟದ ರಾಜಕೀಯ, ಆರ್ಥಿಕ ಸುದ್ದಿಗಳು ಪ್ರಕಟವಾಗತೊಡಗಿತು. ಆದರೆ ಪತ್ರಿಕೆಯ ಪ್ರಸಾರ ಮುಖ್ಯವಾಗಿ ಹಳೆ ಮೈಸೂರು ಪ್ರಾಂತಕ್ಕೆ ಸೀಮಿತವಾಗಿತ್ತು.

ಅಂತಿಮವಾಗಿ "ಜನವಾಣಿ"ಯ ಒಡೆತನ ಬಿ. ಎಸ್. ನಾರಾಯಣ್ ಅವರಿಂದ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರ ಅಳಿಯ ಎಂ. ಡಿ. ನಟರಾಜ್ ಅವರಿಗೆ ಹಸ್ತಾಂತರಗೊಂಡಿತು. ಇವರು ೧೯೮೭ರಲ್ಲಿ ನಿಧನರಾಗುವುದರೊಂದಿಗೆ ೧೯೩೪ರಲ್ಲಿ ಆರಂಭಗೊಂಡ " ಜನವಾಣಿ" ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿತು.

೧೯೬೦ರ ನಂತರದ ದಶಕದಲ್ಲಿ "ಜನವಾಣಿ" ಟ್ಯಾಬ್ಲಾಯ್ಡ್ ಮಾದರಿಯ ಪತ್ರಿಕೆಯಾಗಿ ಪ್ರಕಟವಾಗುತ್ತಿತ್ತು. ಇಪ್ಪತ್ತು ಪುಟಗಳನ್ನು ಹೊಂದಿತ್ತು. ಬೆಂಗಳೂರು ಬಸವನಗುಡಿಯ ಆಂಜನೇಯ ದೇವಸ್ಥಾನ ರಸ್ತೆಯ ಪ್ರಜಾಮತ ಪವರ್ ಪ್ರೆಸ್ ನಲ್ಲಿ ಪತ್ರಿಕೆ ಪ್ರಕಟವಾಗುತ್ತಿತ್ತು. ದಿ ಮೈಸೂರು ಪ್ರೆಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಅಧೀನದಲ್ಲಿ ಪತ್ರಿಕೆಯ ಒಡೆತನವಿತ್ತು. ಪತ್ರಿಕೆಯ ವಾರ್ಷಿಕ ಚಂದಾ ೧೪ ರೂಪಾಯಿಗಳಾಗಿತ್ತು.

~ *ಶ್ರೀರಾಮ ದಿವಾಣ*