ಕನ್ನಡ ಪತ್ರಿಕಾ ಲೋಕ (೧೫) - ರಾಯಭಾರಿ

ಕನ್ನಡ ಪತ್ರಿಕಾ ಲೋಕ (೧೫) - ರಾಯಭಾರಿ

ಪಾಂಗಾಳ ನಾಯಕ್ ಹಾಗೂ ಎಸ್.ಎಲ್.ಭಟ್ ರವರ "ರಾಯಭಾರಿ"

" ರಾಯಭಾರಿ", ಎಸ್. ಲಕ್ಷ್ಮೀ ನಾರಾಯಣ ಭಟ್ (ಎಸ್. ಎಲ್. ಭಟ್) ಅವರ ಸಂಪಾದಕತ್ವದಲ್ಲಿ ಉಡುಪಿಯಿಂದ ಪ್ರಕಟವಾಗುತ್ತಿದ್ದ ರಾಷ್ಟ್ರೀಯ ಕನ್ನಡ ವಾರಪತ್ರಿಕೆ.

೧೯೫೦ರಲ್ಲಿ ಪಾಂಗಾಳ ಉಪೇಂದ್ರ ಶ್ರೀನಿವಾಸ ನಾಯಕ್ ಅವರು ಆರಂಭಿಸಿದ "ರಾಯಭಾರಿ" ಯನ್ನು ಉಪೇಂದ್ರ ಶ್ರೀನಿವಾಸ ನಾಯಕ್ ರವರ ಬಳಿಕ ಅವರ ಪುತ್ರ ಪಾಂಗಾಳ ರಬೀಂದ್ರ ನಾಯಕ್ ಅವರು ಮುನ್ನಡೆಸಿದರು. ತಂದೆ, ಮಗ ಇಬ್ಬರೂ ಪ್ರಸಿದ್ಧ ಉದ್ಯಮಿಗಳಾಗಿದ್ದವರು ಮತ್ತು ದಾನಿಗಳಾಗಿಯೂ ಜನಪ್ರಿಯರು. ಪಾಂಗಾಳ ಉಪೇಂದ್ರ ಶ್ರೀನಿವಾಸ ನಾಯಕ್ ರವರು ಪ್ರಜಾ ಸೋಶಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಒಂದು ಅವಧಿಗೆ ಶಾಸಕರೂ ಆಗಿದ್ದರು.

೧೯೬೦ರ ದಶಕದಲ್ಲಿ "ರಾಯಭಾರಿ" ಯ ಬಿಡಿ ಸಂಚಿಕೆಯ ಬೆಲೆ ಹನ್ನೆರಡು ಪೈಸೆ ಆಗಿತ್ತು. ಅರ್ಧ ವಾರ್ಷಿಕ ಚಂದಾ ದರ ಮೂರು ರೂಪಾಯಿ ಮತ್ತು ವಾರ್ಷಿಕ ಚಂದಾ ದರ ಆರು ರೂಪಾಯಿಗಳಾಗಿತ್ತು (ಅಂಚೆ ವೆಚ್ಚ ಸೇರಿ). 

ಹನ್ನೆರಡು ಪುಟಗಳಲ್ಲಿ ಟ್ಯಾಬ್ಲಾಯ್ಡ್ ಮಾದರಿಯಲ್ಲಿ ಪ್ರಕಟವಾಗುತ್ತಿದ್ದ "ರಾಯಭಾರಿ" ಯನ್ನು ಕೆ.ರಾಘವೇಂದ್ರ ರಾವ್ ಅವರು ತಮ್ಮ ಮೆಜೆಸ್ಟಿಕ್ ಪ್ರೆಸ್ ನಲ್ಲಿ ಮುದ್ರಿಸುತ್ತಿದ್ದರು. ಕತೆ, ಕವನ, ವೈವಿಧ್ಯಮಯ, ಪ್ರಬುದ್ಧ, ದೇಶ ವಿದೇಶಗಳಿಗೆ ಸಂಬಂಧಿಸಿದ ಲೇಖನಗಳು, ಸ್ಥಳೀಯ ಸುದ್ಧಿಗಳು "ರಾಯಭಾರಿ"ಯಲ್ಲಿ ಪ್ರಕಟವಾಗುತ್ತಿತ್ತು.

"ರಾಯ ಕೇಳೆಂದಾ..." ಎಂಬ ಶೀರ್ಷಿಕೆಯಡಿಯಲ್ಲಿ ಎಸ್. ಎಲ್. ಭಟ್ ಅವರು ಬರೆಯುತ್ತಿದ್ದ ಅಂಕಣ ಬರಹವೊಂದು ಬಹು ಜನಪ್ರಿಯಗೊಂಡ ಅಂಕಣ ಬರಹವಾಗಿತ್ತು ಎಂದು ಉಡುಪಿಯ ಯು. ಆರ್. ಜಯವಂತ ಅವರು ಈಗಲೂ ನೆನಪಿಸುತ್ತಾರೆ.

೧೯೭೫ - ೭೬ರ ಸುಮಾರಿಗೆ ಎಸ್. ಎಲ್. ಭಟ್ ಅವರ ನಿಧನದ ತರುವಾಯ "ರಾಯಭಾರಿ" ಪ್ರಕಟಣೆ ನಿಂತಿತು.

~ ಶ್ರೀರಾಮ ದಿವಾಣ