ಕನ್ನಡ ಪತ್ರಿಕಾ ಲೋಕ (೧೬) - ಪ್ರಕಾಶ

ಕನ್ನಡ ಪತ್ರಿಕಾ ಲೋಕ (೧೬) - ಪ್ರಕಾಶ

ಎ. ಜೆ. ಅಲ್ಸೆ ಅವರ "ಪ್ರಕಾಶ"

ಎ. ಜೆ. ಅಲ್ಸೆ ಎಂದೇ ಪ್ರಸಿದ್ಧರಾದ ಉಡುಪಿಯ ಐರೋಡಿ ಜನಾರ್ದನ ಅಲ್ಸೆ ಅವರು ಸಂಪಾದಕರಾಗಿದ್ದ ಸಾಪ್ತಾಹಿಕವೇ "ಪ್ರಕಾಶ". ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬೆನ್ನಿಗೆ ಉಡುಪಿಯಿಂದ ಪ್ರಕಟಣೆ ಆರಂಭಿಸಿದ "ಪ್ರಕಾಶ" , ೧೯೮೦ರ ದಶಕದ ಮೊದಲರ್ಧ ಘಟ್ಟದವರೆಗೂ ಪ್ರಕಟವಾಗುತ್ತಾ ಬಂದು, ಸಂಪಾದಕರಾದ ಎ. ಜೆ. ಅಲ್ಸೆಯವರ ಅಕಾಲ ಮರಣದ ಬಳಿಕ ಸ್ಥಗಿತಗೊಂಡಿತು.

ಪ್ರತೀ ಆದಿತ್ಯವಾರ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿದ್ದ "ಪ್ರಕಾಶ" ದ ಬಿಡಿ ಸಂಚಿಕೆಯ ಬೆಲೆ ೧೯೬೦ ರ ದಶಕದಲ್ಲಿ ಇಪ್ಪತ್ತು ಪೈಸೆಯಾಗಿತ್ತು. ವಾರ್ಷಿಕ ಚಂದಾ ಮೊತ್ತ ವಿಶೇಷಾಂಕಗಳೂ ಸೇರಿ ಹತ್ತು ರೂಪಾಯಿಗಳಾಗಿತ್ತು. ಪುಸ್ತಕ ರೂಪದಲ್ಲಿ ೨೪ ಪುಟಗಳನ್ನೊಳಗೊಂಡು ಬರುತ್ತಿದ್ದ "ಪ್ರಕಾಶ" ಕ್ಕೆ ಆಗ ಉಡುಪಿಯ ಎಸ್. ಆರ್. ಬಿಲ್ಡಿಂಗ್ ನಲ್ಲಿ ಕಾರ್ಯಾಲಯವಿತ್ತು.

"ಸ್ವಾತಂತ್ರ್ಯೋತ್ಸವ ವಿಶೇಷಾಂಕ" ಸಹಿತ ಪ್ರತೀ ವರ್ಷ ಎರಡು ಬಾರಿ ವಿಶೇಷಾಂಕಗಳನ್ನು ಪ್ರಕಟಿಸುತ್ತಿದ್ದ "ಪ್ರಕಾಶ" , ಸಾಹಿತ್ಯಿಕ ಸಾಪ್ತಾಹಿಕವಾಗಿತ್ತು. ಪತ್ರಿಕೆಯನ್ನು ಕೆ. ಎಲ್. ಎನ್. ಹೆಗ್ಡೆಯವರು ತಮ್ಮ "ಪ್ರಭಾಕರ ಪ್ರೆಸ್" ನಲ್ಲಿ ಮುದ್ರಿಸಿಕೊಡುತ್ತಿದ್ದರು.

 ಟಿ. ಎ. ಪೈಗಳ ನಿಕಟವರ್ತಿಯಾಗಿದ್ದ ಎ. ಜೆ. ಅಲ್ಸೆ ಅವರು, ಅಂದು ಬಹು ಪ್ರಸಿದ್ದಿ ಪಡೆದಿದ್ದ "ರಾಮಕೃಷ್ಣ ಥಿಯೇಟರ್ ಪ್ರೈವೆಟ್ ಲಿಮಿಟೆಡ್" ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು ಎಂದು "ಪ್ರಕಾಶ" ದ ಓದುಗರಾಗಿದ್ದ ಹಿರಿಯ ಚಿಂತಕ ಟಿ. ಅಂಗರ ಕಿದಿಯೂರು ಅವರು ನೆನಪಿಸಿಕೊಳ್ಳುತ್ತಾರೆ. ರಾಮಕೃಷ್ಣ ಥಿಯೇಟರ್ ಬಳಿಕ ಗೀತಾಂಜಲಿ ಟಾಕೀಸ್ ಆಯಿತು. ಈಗ ಇದೇ ಜಾಗದಲ್ಲಿ ಗೀತಾಂಜಲಿ ಸಿಲ್ಕ್ಸ್ ಕಟ್ಟಡವಿದೆ.

ಉಡುಪಿ ನಗರದ ಬ್ರಹ್ಮಗಿರಿ ಪ್ರದೇಶದ ರಸ್ತೆಯೊಂದಕ್ಕೆ "ಎ. ಜೆ. ಅಲ್ಸೆ ರಸ್ತೆ" ಎಂದು ಹೆಸರಿಡಲಾಗಿದೆ. ಡಾ. ಕೋಟ ಶಿವರಾಮ ಕಾರಂತ, ಕು. ಶಿ. ಹರಿದಾಸ ಭಟ್ಟ, ಬೈಕಾಡಿ ವೆಂಕಟಕೃಷ್ಣ ರಾಯ, ಗುಂಡ್ಮಿ ಚಂದ್ರಶೇಖರ ಐತಾಳ, ರಾಮಣ್ಣ ಚಡಗ, ಶಿವಕುಮಾರ ಚಡಗ, ನಾ. ಡಿ'ಸೋಜಾ ಸಹಿತ ಹಲವು ಮಂದಿ ಹಿರಿಯ, ಪ್ರಸಿದ್ಧ ಬರಹಗಾರರ ಬರಹಗಳು "ಪ್ರಕಾಶ" ದಲ್ಲಿ ಪ್ರಕಟವಾಗುತ್ತಿದ್ದುವು.

~ ಶ್ರೀರಾಮ ದಿವಾಣ