ಕನ್ನಡ ಪತ್ರಿಕಾ ಲೋಕ (೧೭) - ಭವ್ಯವಾಣಿ

ಕನ್ನಡ ಪತ್ರಿಕಾ ಲೋಕ (೧೭) - ಭವ್ಯವಾಣಿ

ಕೆ. ಎಲ್. ಭಟ್ ಅವರ "ಭವ್ಯವಾಣಿ"

ಕೆ. ಎಲ್. ಭಟ್ ಎಂದೇ ಖ್ಯಾತರಾದ ಉಡುಪಿಯ ಕೆ. ಲಕ್ಷ್ಮೀನಾರಾಯಣ ಭಟ್ ಅವರು ನಡೆಸುತ್ತಿದ್ದ ಮಾಸಪತ್ರಿಕೆ "ಭವ್ಯವಾಣಿ". ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮೈಸೂರು ಪ್ರಾಂತ್ಯದಲ್ಲಿದ್ದ ಅವಧಿ, ೧೯೫೭ರಲ್ಲಿ " ಭವ್ಯವಾಣಿ" ಆರಂಭವಾಯಿತು.

ಪುಸ್ತಕ ರೂಪದಲ್ಲಿ ಬರುತ್ತಿದ್ದ "ಭವ್ಯವಾಣಿ" ೬೪ ಪುಟಗಳನ್ನು ಹೊಂದಿತ್ತು. ಬಿಡಿಪ್ರತಿಯ ಬೆಲೆ ೭೫ ಪೈಸೆಯಾಗಿತ್ತು. ವಾರ್ಷಿಕ ಚಂದಾ ಮೊತ್ತ ೯ ರೂಪಾಯಿಗಳು ಮತ್ತು ಆಜೀವ ಚಂದಾ ೧೧೦ ರೂಪಾಯಿಗಳಾಗಿತ್ತು. ಸಂಪಾದಕರು, ಪ್ರಕಾಶಕರು ಮತ್ತು ಮಾಲಕರಾಗಿದ್ದ ಕೆ. ಎಲ್. ಭಟ್ ಅವರು , ತಮ್ಮ "ಭವ್ಯವಾಣಿ"ಯನ್ನು ಉಡುಪಿಯ ಕೆ. ರಾಮಕೃಷ್ಣ ಅವರ ಲಕ್ಷ್ಮಿ ಪ್ರಿಂಟರ್ಸ್ ನಲ್ಲಿ ಮುದ್ರಿಸುತ್ತಿದ್ದರು.

"ಜ್ಞಾನ - ಸಂಸ್ಕೃತಿ - ಅಭಿರುಚಿ" ಎಂಬ ಧ್ಯೇಯವಾಕ್ಯದೊಂದಿಗೆ ಪ್ರಕಟವಾಗುತ್ತಿದ್ದ ಭವ್ಯವಾಣಿಯಲ್ಲಿ ಟಿ. ಎ. ಪೈ ಅವರೂ ಲೇಖನಗಳನ್ನು ಬರೆಯುತ್ತಿದ್ದರು. ನಾಡಿನ ಹಿರಿಯ, ಪ್ರಸಿದ್ಧ ಬರಹಗಾರರಾದ ಹೊನ್ನಾವರದ ವಿದ್ಯಾಭೂಷಣ ರಾ. ಅ. ಭಟ್ಟ ಕಾಶೀಕರ, ಬಳ್ಕೂರು ಸುಬ್ರಾಯ ಅಡಿಗ, ಡಾ. ಎಂ. ಯು. ಬಹದ್ದೂರ್, ಅಂಕೋಲಾದ ಕುಸುಮಾ ಕೇಣಿಕರ, ಗದಗದ ಪಂ. ಪಂಢರೀನಾಥಾಚಾರ್ಯ, ದಯಾನಂದ ಶೆಣೈ ಕೆ. , ಡಾ. ವೈ. ಎನ್. ಜೆಫಿರೋವ್, ಎನ್. ರಂಗನಾಥ ಶರ್ಮಾ, ವಿಠ್ಠಲ ಶಹಾಣೆ, ತಿರುಮಂಗಲಂಬಾ. ರಾ. ಸುಬ್ರಾಯ ಶಾಸ್ತ್ರಿ, ಕೆ. ಜಿ. ವಸಂತ ಮಾಧವ ಮೊದಲಾದವರ ಬರಹಗಳೂ ಪ್ರಕಟವಾಗುತ್ತಿದ್ದುವು.

ಪುಸ್ತಕ ಪ್ರಕಾಶಕರೂ ಆಗಿದ್ದ ಕೆ. ಎಲ್. ಭಟ್ ಅವರ ಮನೆಯೇ ಭವ್ಯವಾಣಿಯ ಕಾರ್ಯಾಲಯವೂ ಆಗಿತ್ತು. ಈ ಮನೆ ಮತ್ತು ಕಾರ್ಯಾಲಯವನ್ನು ಇಂದಿಗೂ ಉಡುಪಿಯ ಕನಕದಾಸ ರಸ್ತೆ (ಪಡುಪೇಟೆ)ಯಲ್ಲಿ ನೋಡಬಹುದು. ಈ ಮನೆಯ ಹೆಸರು ಇಂದಿಗೂ "ಭವ್ಯವಾಣಿ".

~ ಶ್ರೀರಾಮ ದಿವಾಣ